ಶಹಾಪುರ: ತಾಲೂಕಿನ ಇಬ್ರಾಹಿಂಪುರ ಗ್ರಾಮದ ಅಬ್ದುಲ್ ಭಾಷಾ (ದೇವರ ಕೆರೆ) ಕೆರೆಯಲ್ಲಿನ ಮೀನುಗಳು ನೀರಿನ ಅಭಾವದಿಂದಾಗಿ ಬಿಸಿಲಿನ ತಾಪಕ್ಕೆ ಧಾರುಣವಾಗಿ ಸಾವನ್ನಪ್ಪುತ್ತಿವೆ.
ಪ್ರಸಕ್ತ ಮುಂಗಾರು ಮಳೆ ಬಾರದ ಹಿನ್ನೆಲೆ ಕೆರೆ ನೀರಿಲ್ಲದೆ ಒಣಗುತ್ತಿದೆ. ಅಲ್ಲದೆ ನಾರಾಯಣಪುರ ಎಡದಂಡೆ ಕಾಲುವೆಗೆ ನೀರು ಹರಿಸುವುದನ್ನು ಕಳೆದ 6 ತಿಂಗಳ ಹಿಂದೆಯೇ ನಿಲ್ಲಿಸಲಾಗಿದೆ. ಹೀಗಾಗಿ ಕೆರೆಯಲ್ಲಿ ನೀರಿಲ್ಲದೆ ಮೀನುಗಳು ಒದ್ದಾಡಿ ಸಾಯುತ್ತಿವೆ. ಅವುಗಳ ಸ್ಥಿತಿ ನೋಡಲು ಆಗದು ಎಂದು ಗ್ರಾಮಸ್ಥರು ಮರಕು ಪಡುತ್ತಿದ್ದಾರೆ.
ಸುಮಾರು 200ಕ್ಕೂ ಹೆಚ್ಚು ಎಕರೆ ಪ್ರದೇಶ ಹೊಂದಿದ ಕೆರೆ ಇದಾಗಿದ್ದು, ವಿಸ್ತಾರವಾಗ ಕರೆಯಂಗಳಕ್ಕೆ ಶಹಾಪುರ ಶಾಖಾ ಕಾಲುವೆಯ ಹೆಚ್ಚುವರಿ ನೀರು ಹಾಗೂ ಸೋರಿಕೆ ನೀರು ಕೆರೆಗೆ ಹರಿಯುತ್ತಿರುವುದರಿಂದ ಸದಾ ನೀರು ಇರತಿತ್ತು. ಈ ಬಾರಿ 6 ತಿಂಗಳಿಂದ ಕಾಲುವೆಗೆ ನೀರು ಬಂದಿಲ್ಲ. ಈ ಕೆರೆ ಮೀನು ಸಾಗಾಣಿಕೆ ಇಲಾಖೆ ಅಧೀನದಲ್ಲಿದ್ದು, ಮೀನು ಸಾಗಾಣಿಕೆಗೆ ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆ ಪಡೆದವರು ಕೆರೆಯಲ್ಲಿ ಕಟ್ಲಾ. ರೋಹು, ಸಾಮಾನ್ಯ ಗೆಂಡೆ ಸೇರಿದಂತೆ ಸುಮಾರು ನಾಲ್ಕು ಲಕ್ಷ ಮೀನುಗಳನ್ನು ತಂದು ಕೆರೆಯಲ್ಲಿ ಬಿಡಲಾಗಿತ್ತು ಎಂದು ಸಾಕಾಣಿಕೆದಾರ ತಿಳಿಸುತ್ತಾನೆ.
ಪ್ರಸ್ತುತ ಕೆರೆಯಲ್ಲಿ ನೀರಿಲ್ಲದೆ ಅಂದಾಜು ನಾಲ್ಕು ಲಕ್ಷ ರೂ. ವೆಚ್ಚದಷ್ಟು ಮೀನುಗಳು ಸಾವನ್ನಪ್ಪಿವೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕೆರೆಗೆ ಅಬ್ದುಲ್ ಭಾಷಾ ಮುತ್ಯಾನ ದರ್ಶನಕ್ಕೆ ಬರುವ ಭಕ್ತಾಗಳಿಗೆ ರಾಶಿಗಟ್ಟಲೆ ಸತ್ತು ಬಿದ್ದಿರುವ ಮೀನಿನ ದುರ್ವಾಸನೆ ತಾಳಲಾಗುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕೆರೆಯ ಸ್ವಚ್ಛತೆಗೆ ಮುಂದಾಗಬೇಕು ಎಂಬುದು ಭಕ್ತಾದಿಗಳ ಮನವಿಯಾಗಿದೆ.
ಸೌಲಭ್ಯ ಕಲ್ಪಿಸಲು ಆಗ್ರಹ: ಪ್ರತಿ ಗುರುವಾರ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಆದರೆ ಕನಿಷ್ಟ ಮೂಲ ಸೌಲಭ್ಯಗಳು ಇಲ್ಲಿಲ್ಲ. ಬುರವ ಭಕ್ತಾದಿಗಳು ಉಳಿದು ಕೊಳ್ಳಲು ನೆರಳಿನ ವ್ಯವಸ್ಥೆ ಸಮುದಾಯ ಭವನ ಯಾವುದೊಂದು ಇಲ್ಲಿ ಕಾಣುವುದಿಲ್ಲ. ಗಿಡದ ನೆರಳಲ್ಲಿಯೇ ಭಕ್ತಾದಿಗಳು ಸಂಜೆವರೆಗೆ ಕಳೆದು ಮನೆಗೆ ವಾಪಾಸ್ ಆಗುತ್ತಾರೆ.
ಇದು ಪುರಾತನ ಕಾಲದಿಂದ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ಶಹಾಪುರ, ಸುರಪುರ ಯಾದಗಿರಿ ಭಾಗದಲ್ಲಿ ಹಿಂದೂ ಮತ್ತು ಮುಸ್ಲಿಮರು ಸಾಕಷ್ಟು ಸಂಖ್ಯೆಯಲ್ಲಿ ಅಬ್ದುಲ್ ಭಾಷಾ ಎಂದು ಹೆಸರಿರುವದು ಕಂಡು ಬರುತ್ತದೆ.
ಇಲ್ಲಿಗೆ ಆಗಮಿಸುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಇಲ್ಲಿ ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಅಗತ್ಯವಿದೆ. ಮಹಿಳೆಯರಿಗೆ ಶೌಚಾಲಯದ ಅತ್ಯಗತ್ಯವಿದೆ ಎಂದು ಭಕ್ತಾದಿಗಳು ಆಗ್ರಹಿಸಿದ್ದಾರೆ.