ಶಹಾಪುರ: ಮೌಲ್ಯಾಧಾರಿತ ಬದುಕಿಗೆ ಧರ್ಮಾಚರಣೆ ಮುಖ್ಯ. ಮನುಷ್ಯನಿಗೆ ಬುದ್ಧಿ ಶಕ್ತಿ ಬೆಳೆಯುತ್ತಿದೆ, ಆದರೆ ಶ್ರದ್ಧೆ ಭಾವನೆಗಳು ಬತ್ತಿ ಹೋಗುತ್ತಿವೆ. ಬಹು ಜನ್ಮದ ಪುಣ್ಯದ ಫಲವಾಗಿ ಮಾನವ ಜನ್ಮ ಪ್ರಾಪ್ತವಾಗಿದೆ. ಸಂಸ್ಕಾರ ಸಂಸ್ಕೃತಿಯಿಂದ ಸಾತ್ವಿಕ ಸಮಾಜ ಬೆಳೆಯಲು ಸಾಧ್ಯವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ನಗರದ ಸಿ.ಬಿ. ಶಾಲೆ ಆವರಣದಲ್ಲಿ ಜರುಗಿದ ಧರ್ಮ ಸಂಸ್ಕಾರ ಜನ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸಮಾಜದಲ್ಲಿ ಸಂಸ್ಕಾರ, ಸಂಸ್ಕೃತಿ ಕೊರತೆ ಉಂಟಾಗಿದೆ. ಅರಿವು ಆಚರಣೆ ಇಲ್ಲದ ಮನುಷ್ಯನ ಬದುಕು ಅಶಾಂತಿಯಿಂದ ಕೂಡಿದೆ. ವೈಚಾರಿಕ ಮತ್ತು ಆಧುನಿಕತೆ ಹೆಸರಿನಲ್ಲಿ ಸತ್ಯ ನ್ಯಾಯ ಧರ್ಮವನ್ನು ಕಲುಷಿತಗೊಳಿಸಲಾಗುತ್ತಿದೆ. ಜೀವನ ವಿಕಾಸಕ್ಕೆ ಧರ್ಮ ಪ್ರಜ್ಞೆ ಮತ್ತು ಗುರು ಬೋಧಾಮೃತ ಅವಶ್ಯಕ. ವೀರಶೈವ ಧರ್ಮದಲ್ಲಿ ಸಂಸ್ಕಾರಕ್ಕೆ ಮಹತ್ವದ ಸ್ಥಾನ ಕಲ್ಪಿಸಿದೆ. ಗಂಡು ಹೆಣ್ಣು, ಬಡವ ಶ್ರೀಮಂತ, ಉಚ್ಛ ನೀಚ ಎಂಬ ತಾರತಮ್ಯವಿಲ್ಲದೇ ಎಲ್ಲರಿಗೂ ಧರ್ಮಾಚರಣೆ ಮಾಡಲು ಅವಕಾಶ ಕಲ್ಪಿಸಿದೆ ಎಂದರು.
ನೇತೃತ್ವ ವಹಿಸಿದ ದೋರನಹಳ್ಳಿ ಹಿರೇಮಠದ ವೀರಮಹಾಂತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗುರು ಮತ್ತು ಗುರಿ ಎಲ್ಲರಿಗೂ ಬೇಕು. ಅರಿತು ಆಚರಿಸಿ ಬಾಳಿದಾಗ ಜೀವನ ಸಾರ್ಥಕಗೊಳ್ಳುತ್ತದೆ. ಗುರು ಪೀಠಗಳ ಆಶೀರ್ವಾದ ನಮ್ಮೆಲ್ಲರಿಗೆ ಶ್ರೀರಕ್ಷೆಯಾಗಲೆಂದು ಹರಸಿದರು.
ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿದರು. ಅಖೀಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟದಕ ಅಧ್ಯಕ್ಷ ಬಸವರಾಜೇಂದ್ರ ದೇಶಮುಖ, ಫಕೀರೇಶ್ವರ ಮಠದ ಗುರುಪಾದ ಸ್ವಾಮಿಗಳು, ಗುಂಬಳಾಪುರ ಮಠದ ಸಿದ್ಧೇಶ್ವರ ಸ್ವಾಮಿಗಳು, ಜಂಗಮ ಸಮಾಜದ ಗೌರವಾಧ್ಯಕ್ಷ ಬಸವರಾಜ ಹಿರೇಮಠ, ಕೆರೂಟಗಿ ಶಿವಬಸವ ಸ್ವಾಮಿಗಳು, ಚರಬಸವೇಶ್ವರ ಗದ್ದುಗೆ ಮಠದ ಬಸವಯ್ಯ ಶರಣರು, ಶಹಾಪುರ ಬೆಟ್ಟದ ರುದ್ರಪಶುಪತೇಶ್ವರ ಸ್ವಾಮಿಗಳು, ಕಲಬುರಗಿ ಗಿರಿಯಪ್ಪ ಮುತ್ಯಾ ಸಮ್ಮುಖ ವಹಿಸಿದ್ದರು. ಕರವೇ ಅಧ್ಯಕ್ಷ ಡಾ| ಶರಣು ಗದ್ದುಗೆ, ವೀರಶೈವ ಯುವಘಟಕದ ಅಧ್ಯಕ್ಷ ರವಿ ಮೋಟಗಿ ವೇದಿಕೆ ಮೇಲಿದ್ದರು.
ಮಲ್ಲಿಕಾರ್ಜುನ ಹಿರೇಮಠ ಮತ್ತು ಸಿದ್ಧಾರ್ಥ ಹಿರೇಮಠ ಉಭಯ ವಟುಗಳು ಶಿವದೀಕ್ಷಾ ಅಯ್ನಾಚಾರ ಸ್ವೀಕರಿಸಿ ಗುರು ಹಿರಿಯರ ಆಶೀರ್ವಾದ ಪಡೆದರು. ಸನ್ನತಿ ಚಂದ್ರಶೇಖರ ಶಾಸ್ತ್ರಿಗಳು ವೈದಿಕ ಕಾರ್ಯ ನೆರವೇರಿಸಿದರು. ಅಮರೇಶ ಹಿರೇಮಠ ಸ್ವಾಗತಿಸಿ ಪ್ರಾಸ್ತಾವಿಕ ನುಡಿ ಸಲ್ಲಿಸಿದರು. ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ವಟುಗಳ ಅಜ್ಜಿ ಅಮರಮ್ಮ ಇವರ ತುಲಾಭಾರ ಕಾರ್ಯಕ್ರಮ ನೆರವೇರಿಸಲಾಯಿತು.