ಶಹಾಪುರ: ಕೆಂಪು ಮಣ್ಣು ಒಯ್ಯಲು ಜೆಸಿಬಿ ಮೂಲಕ ಭೂಮಿ ಅಗೆಯುವಾಗ 50 ಅಡಿ ಅಗೆದ ಮೇಲೆ ಆಳದಲ್ಲಿ ನೀರಿನ ಸೆಲೆ ಉಂಟಾಗಿದ್ದು, ಅಂದಾಜು ಒಂದು ಎಕರೆದಷ್ಟು ಭೂಮಿಯಲ್ಲಿ 25ರಿಂದ 30 ಅಡಿ ನೀರು ತುಂಬಿಕೊಂಡಿದ್ದು, ಯುವಕರ ಮೈ ಮನ ತಣಿಸುವ ಪ್ರಕೃತಿ ನಿರ್ಮಿತ ಈಜುಕೊಳದಂತಾಗಿದೆ.
ತಾಲೂಕಿನ ಬೆನಕಹಳ್ಳಿ ಗ್ರಾಮ ಸಮೀಪ ಜಮೀನೊಂದರಲ್ಲಿ ಮಣ್ಣು ಅಗೆಯಲಾಗಿದೆ. ಪ್ರಸ್ತುತ ಇಲ್ಲಿಗೆ ನೂರಾರು ಯುವಕರು ಈಜು ಕಲಿಯಲು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಈ ಬಾರಿ ಮಳೆ ಅಭಾವದಿಂದ ಸಾಕಷ್ಟು ಹಳ್ಳ, ಕೊಳ್ಳ ತೆರೆದ ಬಾವಿಗಳಲ್ಲಿ ನೀರು ಬತ್ತಿದ್ದು, ಸಂಕಷ್ಟ ಎದುರಿಸುವ ಸಂದರ್ಭದಲ್ಲಿ ಭೂಮಿಯೊಂದರಲ್ಲಿ ಅಂತರ್ಜಲ ಪತ್ತೆಯಾಗಿ ನೀರು ತುಂಬಿಕೊಂಡಿರುವುದು ಜನರಲ್ಲಿ ಉತ್ಸಾಹ ಮೂಡಿಸಿದೆ.
ಬರದಿಂದ ಕಂಗಾಲಾದ ಜನಕ್ಕೆ ಕುಡಿಯಲು ನೀರು ದೊರೆಯದಂತ ಸ್ಥಿತಿಯಲ್ಲಿ ಯುವಕರಿಗೆ ಈಜಾಡಲು ಇಷ್ಟೊಂದು ದೊಡ್ಡ ಮಟ್ಟದಲ್ಲಿ ನೀರಿನ ಸೆಲೆ ಕಂಡು ಬಂದಿದ್ದು, ನಿಜಕ್ಕೂ ಆಶ್ಚರ್ಯವಾಗಿದೆ ಎನ್ನುತ್ತಾರೆ ಇಲ್ಲಿಗೆ ಆಗಮಿಸಿದ ಯುವಕರು.
ನಗರ ಸಮೀಪದ ಬೆನಕನಹಳ್ಳಿ ಗ್ರಾಮದ ಮೇಲ್ಭಾಗ ರೈಲು ನಿಲ್ದಾಣ ಕಾಮಗಾರಿ ಮತ್ತು ಈ ಮೂಲಕ ಹಾದು ಹೋಗಿರುವ ರೈಲು ಹಳಿ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಕಾಮಗಾರಿಗಾಗಿ ಸಾಕಷ್ಟು ಕೆಂಪು ಮಣ್ಣು ಅಗತ್ಯವಿರುವ ಕಾರಣ ರೈಲು ಹಳಿ ನಿರ್ಮಾಣದ ಗುತ್ತಿಗೆದಾರರು ಸಮೀಪದ ಕೆಂಪು ಮಣ್ಣು ಹೊಂದಿದ ಜಮೀನುಗಳನ್ನು ದುಡ್ಡು ಕೊಟ್ಟು ಗುತ್ತಿಗೆ ಪಡೆದು ಆ ಮಣ್ಣು ತೋಡಿ ಅದನ್ನು ತೆಗೆದುಕೊಂಡು ಬಂದು ಕಾಮಗಾರಿಗೆ ಬಳಕೆ ಮಾಡುತ್ತಿದ್ದಾರೆ.
ಬೆನಕನಹಳ್ಳಿ ಸಮೀಪದ ಓರ್ವ ರೈತನ ಜಮೀನು ಪಡೆದಿದ್ದ, ರೈಲು ಹಳಿ ನಿರ್ಮಾಣ ಗುತ್ತಿಗೆದಾರರು, ಇಲ್ಲಿ ನಿಯಮಕ್ಕೂ ಮೀರಿ ಹೆಚ್ಚು ಆಳ ತೋಡಿದ್ದು, ನೀರಿನ ಸೆಲೆ ಬುಗ್ಗೆ ಮೇಲೆದ್ದಿವೆ. ಇದರಿಂದಾಗಿ ತೋಡಿದ್ದ ಅಷ್ಟು ಆಳ ನೀರಿನಿಂದ ಶೇಖರಣೆ ಆಗುತ್ತಿದೆ.
ರೈಲು ಹಳಿ ಕಾಮಗಾರಿಗೆ ಇಲ್ಲಿಂದ ಮಣ್ಣು ಒಯ್ಯುತ್ತಿದ್ದರು. ಸಾಕಷ್ಟು ಆಳ ತೋಡಿದ್ದು, ನೀರಿನ ಸೆಲೆ ಎದ್ದಿವೆ. ಅದರಿಂದ ಇಡಿ ತಗ್ಗು ಪ್ರದೇಶ ನೀರಿನಿಂದ ತುಂಬುತ್ತಿದೆ. ನೀರು ಚೆನ್ನಾಗಿವೆ. ಸದ್ಯ ಬಿಸಿಲ ಬೇಗೆ ತಣಿಸಿಕೊಳ್ಳಲು ಯುವ ಸಮೂಹಕ್ಕೆ ಸಹಕಾರವಾಗಿದೆ.
•
ಶರಣು ಕಟ್ಟಿಮನಿ, ಸ್ಥಳೀಯ