ಕಲಬುರಗಿ: ಜಿಲ್ಲೆಯ ಶಹಾಬಾದ್ ನಗರಸಭೆಯ ಮಾಜಿ ಅಧ್ಯಕ್ಷ ಗಿರೀಶ್ ಕಂಬಾನೂರ ಅವರನ್ನು ಸೋಮವಾರ ಮಧ್ಯಾಹ್ನ ಶಹಾಬಾದ್ ರೈಲು ನಿಲ್ದಾಣದಲ್ಲಿ ಮಾರಕಾಸ್ತ್ರದಿಂದ ಇರಿದು ಹತ್ಯೆಗೈಯಲಾಗಿದೆ.
ಮುಂದಿನ ವಾರ ಬೆಂಗಳೂರಿಗೆ ತೆರಳಲು ಟಿಕೆಟ್ ಕಾಯ್ದಿರಿಸಲು ರೈಲು ನಿಲ್ದಾಣಕ್ಕೆ ಬಂದ ಸಂದರ್ಭದಲ್ಲಿ ಆಟೋ ಹಾಗೂ ಬೈಕ್ ನಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮನಸೋ ಇಚ್ಚೆ ಇರಿದು ಕೊಲೆಗೈದಿದ್ದಾರೆ.
ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಗಿರೀಶ ಕಂಬಾನೂರ ಅವರನ್ನು ಚಿಕಿತ್ಸೆಗಾಗಿ ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿತ್ತಾದರೂ ದಾರಿ ನಡುವೆ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಕೊಚ್ಚಿ ಹೋದ ಕಾಫಿ ತೋಟ; ಕುಸಿದು ಬಿದ್ದ ಮನೆ; ಮಲೆನಾಡಿನ ಜನಜೀವನ ಅಸ್ತವ್ಯಸ್ತ
ಕೊಲೆಗೆ ನಿಖರವಾದ ಕಾರಣಗಳು ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷದವರಾಗಿರುವ ಗಿರೀಶ ಕಂಬಾನೂರ ಪತ್ನಿ ಅಂಜಲಿ ಕಂಬಾನೂರ ಅವರೇ ಈಗ ಶಹಾಬಾದ್ ನಗರಸಭೆ ಅಧ್ಯಕ್ಷರಾಗಿದ್ದಾರೆ.
ಈ ಕೊಲೆ ಇಡೀ ಶಹಾಬಾದ್ ಪಟ್ಟಣದಲ್ಲಿ ತಲ್ಲಣ ಮೂಡಿಸಿದ್ದು, ಜನ ಆತಂಕಕ್ಕೆ ಒಳಗಾಗಿದ್ದಾರೆ.