ಬೆಂಗಳೂರು: ರಾಜ್ಯ ಬಜೆಟ್‌ನಲ್ಲಿ ಶಾದಿ ಭಾಗ್ಯ ಯೋಜನೆಗೆ ಹಣ ನಿಗದಿಯಾಗದಿರುವುದು, ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಕಳೆದ ಬಾರಿಗಿಂತ ಶೇ.36 ಕಡಿಮೆ ಹಣ ಇಡಲಾಗಿದೆ ಎಂದು ಅಲ್ಪ ಸಂಖ್ಯಾತ ಸಮುದಾಯದ ಶಾಸಕರು ಅಸಮಾಧಾನಗೊಂಡಿದ್ದಾರೆ. 2019-20 ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಗೆ 1985.86 ಕೋಟಿ ರೂ. ಒದಗಿಸಲಾಗಿತ್ತು. ಈ ಬಾರಿ ಕೇವಲ 1278.30 ಕೋಟಿ ರೂ. ಮಾತ್ರ ನೀಡಿ 707.56 ಕೋಟಿ ರೂ. ಕಡಿತ ಮಾಡಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಮಾಜಿ ಸಚಿವರಾದ ಜಮೀರ್ ಅಹಮದ್, ಯು.ಟಿ. ಖಾದರ್, ತನ್ವೀರ್ ಸೇಠ್ ಸೇರಿ ಎಲ್ಲಾ ಶಾಸಕರೂ ಅಧಿವೇಶನದಲ್ಲಿ ವಿಶೇಷ ಚರ್ಚೆಗೆ ಒತ್ತಾ ಯಿಸಲು ಮುಂದಾಗಿ ಸ್ಪೀಕರ್ ಬಳಿ ಹೆಚ್ಚಿನ ಸಮಯಾವಕಾಶ ಕೋರಲು ನಿರ್ಧರಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಮಾಜಿ ಸಚಿವ ಜಮೀರ್ ಅಹಮದ್, ಶಾದಿ ಭಾಗ್ಯ ಯೋಜನೆಯಡಿ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರ ಅವಧಿಯಲ್ಲಿ 60 ಕೋಟಿ ರೂ. ಒದಗಿಸಲಾಗಿತ್ತು.
ಇನ್ನೂ 33 ಸಾವಿರ ಅರ್ಜಿ ಬಾಕಿ ಇವೆ. ಇದಕ್ಕೆ 160 ಕೋಟಿ ರೂ. ಅಗತ್ಯವಿತ್ತು. ಆದರೆ, ಈ ಬಾರಿ ಬಜೆಟ್‌ನಲ್ಲಿ ಯೋಜನೆಯನ್ನೇ ಕೈ ಬಿಡಲಾಗಿದೆ ಎಂದು ಆರೋಪಿಸಿದರು. ಅಲ್ಪಸಂಖ್ಯಾತರ ಕೌಶಲ್ಯ ಅಭಿವೃದ್ಧಿ, ವಿದ್ಯಾರ್ಥಿ ವೇತನಕ್ಕಾಗಿ ವಾರ್ಷಿಕವಾಗಿ ನೀಡುತ್ತಿದ್ದ 275 ಕೋಟಿ ರೂ. ಗಳಲ್ಲಿ 175 ಕೋಟಿ ರೂ. ಕಡಿತ ಮಾಡಿ 100 ಕೋಟಿ ರೂ. ನೀಡಲಾಗಿದೆ.
ಸಮುದಾಯಕ್ಕೆ ಕಿರು ಸಾಲ ವ್ಯವಸ್ಥೆಗಾಗಿ ಕಳೆದ ಬಾರಿ 83 ಕೋಟಿ ರೂ. ನೀಡಲಾಗಿತ್ತು. ಈ ಬಾರಿ ಅದನ್ನು 55 ಕೋಟಿ ರೂ.ಗೆ ಇಳಿಸಲಾಗಿದೆ. ವಕ್ಫ್ ಬೋರ್ಡ್‌ಗೆ ಸೇರಿದ ಮಸೀದಿಗಳಲ್ಲಿನ ಇಮಾಮ್, ಮೌಝಾನ್‌ಗಳಿಗೆ ಗೌರವ ಧನ ನೀಡಲು ಕಳೆದ ಬಾರಿ 65 ಕೋಟಿ ರೂ. ಒದಗಿಸಲಾಗಿತ್ತು. ಈ ಬಾರಿ 55 ಕೋಟಿ ರೂ.ಗೆ ಇಳಿಸಲಾಗಿದೆ. ಈ ಎಲ್ಲಾ ವಿಷಯ ಅಧಿವೇಶನದಲ್ಲಿ ಸಮುದಾಯದ ಎಲ್ಲಾ ಶಾಸಕರು ಪ್ರಸ್ತಾಪಿಸಲಿದ್ದೇವೆಂದರು.