ಶಬರಿಮಲೆ : ಕೇರಳದ ಪಟ್ಟಾನಂತಿಟ್ಟ ಜಿಲ್ಲೆಯಲ್ಲಿರುವ ದಕ್ಷಿಣ ಭಾರತದ ಪ್ರಸಿದ್ದ ಯಾತ್ರಾ ಸ್ಥಳ ಶಬರಿಮಲೇ ಸ್ವಾಮಿ ಅಯ್ಯಪ್ಪನ ಸನ್ನಿದಾನ ಮಕರವಿಳಕ್ಕು ಉತ್ಸವಕ್ಕಾಗಿ ಡಿ.30ರಂದು ಸಂಜೆ 5 ಗಂಟೆಗೆ ತೆರೆದುಕೊಂಡ ಸನ್ನಿಧಾನದ ಬಾಗಿಲು ಜ.20ರಂದು ಬೆಳಿಗ್ಗೆ 7ಕ್ಕೆ ಮುಚ್ಚಲಾಗುತ್ತದೆ.
ನ.16 ರಿಂದ ಆರಂಭಗೊಂಡಿದ್ದ ಮಂಡಲ ಉತ್ಸವ ಡಿ.27ರ ತನಕ ನಡೆದು ಶಬರಿಮಲೆ ಬಾಗಿಲು ಮುಚ್ಚಲಾಗಿತ್ತು.ನಂತರ 21 ದಿನಗಳ ಮಕರ ಉತ್ಸವಕ್ಕಾಗಿ ಡಿ.30ರಂದು ತೆರದುಕೊಂಡಿತು.ಜ.15ರಂದು ಮಕರವಿಳಕ್ಕು ಉತ್ಸವ ಹಾಗೂ ಮಕರ ಜ್ಯೋತಿ ದರ್ಶನವಾಯಿತು.
ಹೀಗೆ ಕಳೆದ 2 ತಿಂಗಳಿನಿಂದ ಸದಾ ಭಕ್ತರ ಆಗಮನದಿಂದ ಜಿನುಗುತ್ತಿದ್ದ ಅಯ್ಯಪ್ಪನ ಸನ್ನಿಧಾನದಲ್ಲಿ ಮಕರವಿಲಕ್ಕು ಉತ್ಸವದ ಬಳಿಕ ಭಕ್ತರ ಸಂಖ್ಯೆ ಇಳಿಮುಖವಾಗಿದೆ.ಈ ವರ್ಷ ಕಳೆದ ವರ್ಷಕ್ಕಿಂತ ಹೆಚ್ಚು ಬಾರಿ ಕ್ಷೇತ್ರಕ್ಕೆ ಆಗಮಿಸಿದ್ದಾರೆ.
ಈ ವರ್ಷದಲ್ಲಿ ಡಿ.25,26,27 ರಂದು ಅನಿರೀಕ್ಷಿತವಾಗಿ ಭಕ್ತರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದ್ದರಿಂದ ಭಕ್ತರಿಗೆ ದರ್ಶನಕ್ಕೆ ತೊಂದರೆಯಾಗಿತ್ತು. ಡಿ.26ರಂದು ಸೂರ್ಯಗ್ರಹಣ ಹಾಗೂ ಡಿ.27ರಂದು ಮಂಡಲ ಪೂಜೆ ನಡೆದು ಸನ್ನಿಧಾನದ ಬಾಗಿಲು ಮುಚ್ಚುವ ಕಾರಣ ಈ ಏರಿಕೆ ಕಂಡು ಬರಲು ಕಾರಣವಾಯಿತು.
ಅಲ್ಲದೆ ಜ.10ರಿಂದ ಪ್ರತೀವರ್ಷದಂತೆ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗುವ ಕಾರಣದಿಂದ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು.ಅದೇ ರೀತಿ ಜ.15ರಂದು ಮಕರ ಜ್ಯೋತಿ ಉತ್ಸವದಂದು ಜನಸಂದಣಿ ಕಿಕ್ಕಿರಿದಿತ್ತು .ಇದು ಸಂಭವನೀಯವಾಗಿದ್ದರಿಂದ ಪೂರಕ ವ್ಯವಸ್ಥೆ ಮಾಡಲಾಗಿತ್ತು ಎಂದು ಪತ್ತನಂತಿಟ್ಟ ಜಿಲ್ಲಾಡಳಿತ ಹಾಗೂ ತಿರುವಾಂಕೂರ್ ದೇವಸ್ವಂ ಬೋರ್ಡ್ ತಿಳಿಸಿದೆ.
ಹೀಗೆ ಮಂಡಲ ಉತ್ಸವ ಹಾಗೂ ಮಕರ ಉತ್ಸವಕ್ಕಾಗಿ ತೆರೆದುಕೊಂಡ ಅಯ್ಯಪ್ಪ ಸ್ವಾಮಿಯ ತಿರುನಡೆ ಜ.20ರಂದು ಬೆಳಿಗ್ಗೆ 7ಕ್ಕೆ ಮುಚ್ಚಲಾಗುತ್ತದೆ.
ಇನ್ನು ಕುಂಭ ಮಾಸದ ಪೂಜೆಗೆ ಪೆಭ್ರವರಿಯಲ್ಲಿ ತಿರುನಡೆ ತೆರದುಕೊಳ್ಳಲಿದೆ.
– ಪ್ರವೀಣ್ ಚೆನ್ನಾವರ