Advertisement

ಸರ್ಕಾರಿ ಶಾಲೆ ಮುಚ್ಚುವ ಹುನ್ನಾರಕ್ಕೆ ಎಸ್‌ಎಫ್‌ಐ ಖಂಡನೆ

11:58 AM Aug 14, 2018 | Team Udayavani |

ರಾಯಚೂರು: ಕಡಿಮೆ ಸಂಖ್ಯೆಯ ದಾಖಲಾತಿ ಪಡೆದಿರುವ 14,451 ಸರ್ಕಾರಿ ಶಾಲೆಗಳನ್ನು ವಿಲೀನ ಹೆಸರಿನಲ್ಲಿ ಮುಚ್ಚಲು ಹೊರಟಿರುವುದನ್ನು ವಿರೋಧಿಸಿ ಎಸ್‌ಎಫ್‌ಐ ಜಿಲ್ಲಾ ಘಟಕದ ಸದಸ್ಯರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು. ಶಾಲೆಗಳ ಬಲವರ್ಧನೆಗೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರಿ ಶಾಲೆಗಳನ್ನು ಮುಚ್ಚುವುದು ನಾಡ ದ್ರೋಹ ಹಾಗೂ ಶಿಕ್ಷಣ ವಿರೋಧಿ ಕೆಲಸವಾಗಿದೆ. ಮೂಲ ಸೌಕರ್ಯಗಳಿಲ್ಲದೇ ನರಳುತ್ತಿರುವ ಶಾಲೆಗಳಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ 2,515 ಶಾಲೆಗಳಿಗೆ ಸ್ವಂತ ಕಟ್ಟಡಗಳಿಲ್ಲ. 27,039 ಶಾಲೆಗಳು ಶಿಥಿಲಗೊಂಡಿದ್ದು, ದುರಸ್ತಿ ಕಾರ್ಯ ಮಾಡಬೇಕಾಗಿದೆ. 8,389 ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ 13,000 ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆಯೂ ಇಲ್ಲವಾಗಿದೆ. 32,512 ಶಿಕ್ಷಕರ ಕೊರತೆಯಿದೆ. ಶೇ. 44ರಷ್ಟು ಶಾಲೆಗಳಲ್ಲಿ ಕ್ರೀಡಾಂಗಣ ವ್ಯವಸ್ಥೆ ಇಲ್ಲ. ಶೇ 33ರಷ್ಟು ಶಾಲೆಗಳಿಗೆ ಕಾಂಪೌಂಡ್‌ ಹಾಗೂ ವಿದ್ಯುತ್‌ ಸೌಕರ್ಯವಿಲ್ಲ. ಸೌಕರ್ಯಗಳ ಕೊರತೆಯಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಆರೋಪಿಸಿದರು.

ಸರ್ಕಾರಿ ಶಾಲೆಗಳನ್ನು ಮುಚ್ಚುವ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚಾಗಲು ಅವಕಾಶ ನೀಡುವ ಹುನ್ನಾರವನ್ನು ಸರ್ಕಾರ ನಡೆಸಿದೆ. ಕೂಡಲೇ ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರ ಕೈಬಿಡಬೇಕು ಎಂದು ಆಗ್ರಹಿಸಿದರು.

Advertisement

ದೇವದುರ್ಗ ತಾಲೂಕಿನ ಜಾಲಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಗೀತಾ ಮೂಲಿಮನಿ ಅವರ ಎರವಲು ಸೇವೆ ಕೂಡಲೇ ರದ್ದುಪಡಿಸಬೇಕು. ವಿದ್ಯಾರ್ಥಿಗಳ ಪಾಲಕರಲ್ಲದ ಅನಧಿಕೃತವಾಗಿ ಶಾಲಾಭಿವೃದ್ಧಿ ಸಮಿತಿ ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು. ಸಂಘಟನೆ ಜಿಲ್ಲಾ ಘಟಕ ಅಧ್ಯಕ್ಷ ಶಿವಕುಮಾರ ಮ್ಯಾಗಳಮನಿ, ಲಿಂಗಣ್ಣ, ಲಿಂಗರಾಜ ಕಂದಗಲ್‌, ಅಮರೇಶ, ಕಾಶಮ್ಮ, ನರಸಣ್ಣ ನಾಯಕ, ಶಬ್ಬೀರ್‌, ಗುರುನಾಯಕ, ರಾಜು, ವೆಂಕೋಬ, ಕೆ.ಜಿ.ವೀರೇಶ
ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next