Advertisement

ಲೈಂಗಿಕ ದೌರ್ಜನ್ಯ: ಎಫ್ಐಆರ್‌ ದಾಖಲು

11:43 AM Jan 04, 2017 | Team Udayavani |

ಬೆಂಗಳೂರು: ಎಂ.ಜಿ.ರಸ್ತೆಯಲ್ಲಿ ವರ್ಷಾಚರಣೆ ಸಂಭ್ರಮದ ವೇಳೆ ನಡೆದಿದೆ ಎನ್ನಲಾದ ಯುವತಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಕೊನೆಗೂ ಎಫ್ಐಆರ್‌ ದಾಖಲಾಗಿದೆ. ಘಟನೆ ಸಂಬಂಧ ಎಂ.ಜಿ.ರಸ್ತೆ ಸುತ್ತಮುತ್ತ ಅಳವಡಿಸಲಾಗಿದ್ದ ಸುಮಾರು 40ಕ್ಕೂ ಸಿಸಿಟೀವಿಗಳ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕ ಸಾಕ್ಷಿ ಲಭ್ಯವಾಗಿದ್ದು, ಎಫ್ಐಆರ್‌ ದಾಖಲಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌ ಸ್ಪಷ್ಟ ಪಡಿಸಿದ್ದಾರೆ. 

Advertisement

ಪ್ರಕರಣ ತನಿಖೆ ಹಂತದಲ್ಲಿದ್ದು, ಅಧಿಕಾರಿಗಳು ಸದ್ದಿಲ್ಲದೇ ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಎಂ.ಜಿ.ರಸ್ತೆಯಲ್ಲಿ ಯುವತಿಯರ ಮೇಲೆ ಲೈಂಗಿಕ ಕಿರುಕುಳ ನಡೆದಿರುವ ಕುರಿತು ರಾಷ್ಟ್ರೀಯ ಹಾಗೂ ಆಂಗ್ಲ ಮಾಧ್ಯಮಗಳಲ್ಲಿ ರೋಚಕವಾಗಿ ಸುದ್ದಿ ಪ್ರಕಟವಾಗುತ್ತಿದ್ದಂತೆ ರಾಷ್ಟ್ರವ್ಯಾಪಿ ಭಾರೀ ಸುದ್ದಿಯಾಗಿತ್ತು. ಇದಾದ ಬಳಿಕ ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತ್ತು.

ಪ್ರಕರಣದ ತನಿಖೆಯ ನೇತೃತ್ವವನ್ನು ಹಿರಿಯ ಮಹಿಳಾ ಐಪಿಎಸ್‌ ಅಧಿಕಾರಿ ಮಾಲಿನಿ ಕೃಷ್ಣಮೂರ್ತಿ ಅವರಿಗೆ ವಹಿಸಲಾಗಿತ್ತು. ಈ ನಡುವೆ ಸ್ಪಷ್ಟ ಕುರುಹುಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಲೈಂಗಿಕ ಕಿರುಕುಳ ಆರೋಪ ಕುರಿತು ಸ್ವಯಂಪ್ರೇರಿತ ದೂರು ದಾಖಲಿಸುವ ಕುರಿತು ಕಾನೂನು ತಜ್ಞರ ಅಭಿಪ್ರಾಯ ಪಡೆಯಲು ಪೊಲೀಸ್‌ ಅಧಿಕಾರಿಗಳು ಮುಂದಾಗಿದ್ದರು. ಈ ಸಂಬಂಧ ಮಂಗಳವಾರ ಸಂಜೆ ಆಯುಕ್ತರ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ಸಭೆ ಸಹ ನಡೆದಿತ್ತು ಎಂದು ವಿಶ್ವಸನೀಯ ಮೂಲಗಳು ಹೇಳಿವೆ.

40 ಸಿಸಿಟೀವಿಗಳ ಪರಿಶೀಲನೆ: ಎಂ.ಜಿ.ರಸ್ತೆಯ ವರ್ಷಾಚರಣೆ ವೇಳೆ ಯುವತಿಯರ ಮೇಲಿನ ಲೈಂಗಿಕ ಕಿರುಕುಳ ಆರೋಪ ಸಂಬಂಧ ಎಂ.ಜಿ.ರಸ್ತೆ ಸುತ್ತಮುತ್ತ ಸುಮಾರು 40 ಕಡೆ ಅಳವಡಿಸಲಾಗಿದ್ದ ಸಿಸಿಟೀವಿಗಳನ್ನು ವಶಕ್ಕೆ ಪಡೆದು ಪೊಲೀಸರು ಪರಿಶೀಲನೆ ನಡೆಸಿದ್ದರು.  ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್‌ಸ್ಟ್ರೀಟ್‌ ಹಾಗೂ ಕಾವೇರಿ ಎಂಪೋರಿಯಂ ಪ್ರದೇಶದ ವ್ಯಾಪ್ತಿ ಅಂಗಡಿಗಳು ಹಾಗೂ ಅಂದು ಭದ್ರತೆಗೆ ಪೊಲೀಸರು ಅಳವಡಿಸಿದ್ದ ಸಿಸಿಟೀವಿಗಳನ್ನು ವಶಕ್ಕೆ ಪಡೆದು ದೃಶ್ಯಾವಳಿಗಳನ್ನು ಪರೀಕ್ಷಿಸಿದಾಗ ಯುವತಿಯರ ಮೇಲೆ ಲೈಂಗಿಕ ಶೋಷಣೆ ನಡೆದಿರುವ ಕುರಿತು ಸಾಕ್ಷಿ ಲಭ್ಯವಾಗಿದೆ.

ಹೀಗಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. 100ಕ್ಕೂ ಅಧಿಕ ಪೊಲೀಸರ ವಿಚಾರಣೆ: ಅಲ್ಲದೆ ಅಂದು ಎಂ.ಜಿ.ರಸ್ತೆಯಲ್ಲಿ ಭದ್ರತೆಗೆ ನಿಯೋಜಿತರಾಗಿದ್ದ ಎಸಿಪಿ, ಇನ್ಸ್‌ಪೆಕ್ಟರ್‌, ಪಿಎಸ್‌ಐ ಹಾಗೂ ಕಾನ್‌ಸ್ಟೆàಬಲ್‌ಗ‌ಳು ಸೇರಿದಂತೆ ಸುಮಾರು 100ಕ್ಕೂ ಅಧಿಕ ಪೊಲೀಸರನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಗಿತ್ತು.

Advertisement

ಫೋಟೋ ತಪ್ಪಿಸಿಕೊಳ್ಳಲು ಮಹಿಳಾ ಪಿಐ ತಬ್ಬಿದ ಯುವತಿ? 
ಜನಜಂಗುಳಿ ಮಧ್ಯೆ ಸಿಲುಕಿಕೊಂಡ ಯುವತಿ, ಆ ವೇಳೆ ಕೆಲವರು ಫೋಟೋ ತೆಗೆಯುತ್ತಿರುವುದನ್ನು ಕಂಡು ರಕ್ಷಣೆಗೆ ಮಹಿಳಾ ಪೊಲೀಸ್‌ ಇನ್ಸ್‌ಪೆಕ್ಟರ್‌ ಮೊರೆ ಹೋಗಿದ್ದರು. ಇದನ್ನೇ ಲೈಂಗಿಕ ದೌರ್ಜನ್ಯದಿಂದ ಯುವತಿ ಆಘಾತಗೊಂಡು ಮಹಿಳಾ ಇನ್ಸ್‌ಪೆಕ್ಟರ್‌ರಲ್ಲಿ ರಕ್ಷಣೆ ಪಡೆದಿದ್ದಾಳೆ ಎಂದು ಬಿಂಬಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳ ಮುಂದೆ ಅಂದು ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಮಹಿಳಾ ಪೊಲೀಸರು ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ. 

ಆಯುಕ್ತರ ಜತೆ ಕೇಂದ್ರ ವಿಭಾಗದ ಅಧಿಕಾರಿಗಳ ಸಭೆ
ಈ ಈ ಘಟನೆ ಸಂಬಂಧ ಸ್ವಯಂ ಪ್ರೇರಿತ ಎಫ್ಐಆರ್‌ ದಾಖಲಿಸುವ ಕುರಿತು ಹಿರಿಯ ಅಧಿಕಾರಿಗಳ ಜತೆ ನಗರದ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌ ಚರ್ಚಿಸಿದ್ದರು. ತಮ್ಮ ಕಚೇರಿಗೆ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ಹಾಗೂ ಕೇಂದ್ರ ವಿಭಾಗದ ಡಿಸಿಪಿ ಡಾ.ಚಂದ್ರಗುಪ್ತ ಅವರನ್ನು ಮಂಗಳವಾರ ಸಂಜೆ  ಕರೆಸಿಕೊಂಡ ಆಯುಕ್ತರು, ಘಟನೆ ಕುರಿತು ಎರಡು ದಿನಗಳಿಂದ ನಡೆದಿರುವ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು.

ಎಂ.ಜಿ.ರಸ್ತೆಯಲ್ಲಿ ವರ್ಷಾಚರಣೆ ವೇಳೆ ನಡೆದಿರುವ ಘಟನೆ ಬಗ್ಗೆ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿವೆ. ಸಿಸಿಟೀವಿ ದೃಶ್ಯಾವಳಿಗಳ ಪರಿಶೀಲನೆ ಬಳಿಕ ಸಾಕ್ಷಿ ಲಭ್ಯವಾಗಿದ್ದು, ಘಟನೆ ಸಂಬಂಧ ಎಫ್ಐಆರ್‌ ದಾಖಲಿಸಿಕೊಳ್ಳಲಾಗಿದೆ. ತನಿಖೆ ಪ್ರಗತಿಯಲ್ಲಿದೆ. 
-ಪ್ರವೀಣ್‌ ಸೂದ್‌, ನಗರ ಪೊಲೀಸ್‌ ಆಯುಕ್ತ

ಎಂ.ಜಿ.ರಸ್ತೆಯಲ್ಲಿ ವರ್ಷಾಚರಣೆ ವೇಳೆ ಯುವತಿಯರ ಮೇಲೆ ದೌರ್ಜನ್ಯ ನಡೆದಿರುವ ಪ್ರಕರಣ ಕುರಿತು ಎಫ್ಐಆರ್‌ ದಾಖಲಾಗಿದೆ. ತನಿಖೆ ಪ್ರಗತಿಯಲಿದ್ದು, ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. 
-ಚಂದ್ರಗುಪ್ತ, ಡಿಸಿಪಿ, ಕೇಂದ್ರ ವಲಯ

Advertisement

Udayavani is now on Telegram. Click here to join our channel and stay updated with the latest news.

Next