ಉಡುಪಿ: ವರ್ಷದ ಹಿಂದೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ತಪ್ಪಿತಸ್ಥನಿಗೆ 3 ವರ್ಷಗಳ ಕಠಿನ ಶಿಕ್ಷೆ ವಿಧಿಸಿ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ (ಪೋಕ್ಸೋ) ಸೋಮವಾರ ಆದೇಶಿಸಿದೆ.
ಕೆಳಾರ್ಕಳಬೆಟ್ಟಿನಲ್ಲಿ ಬಾಡಿಗೆ ಮನೆಯಲ್ಲಿದ್ದ ಮೊಹಮ್ಮದ್ ಇಸ್ಮಾಯಿಲ್ (54) ಶಿಕ್ಷೆಗೆ ಒಳಗಾದವನು.
2023ರ ಮಾರ್ಚ್ ತಿಂಗಳಿನಲ್ಲಿ ಶಾಲಾ ರಜಾ ದಿನದಲ್ಲಿ ಬಾಲಕಿಯು ತನ್ನ ತಂಗಿ ಹಾಗೂ ತಮ್ಮನೊಂದಿಗೆ ಮೊಹಮ್ಮದ್ ಇಸ್ಮಾಯಿಲ್ (54)ನ ಮನೆಗೆ ಅರೆಬಿಕ್ ಕಲಿಯಲು ಹೋಗುತ್ತಿದ್ದಳು. ಆಗ ಆರೋಪಿಯು ತನ್ನ ಮನೆಯಲ್ಲಿ ಬಾಲಕಿಯನ್ನು ಬೆಡ್‌ರೂಮ್‌ಗೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದ.
ಅಲ್ಲದೆ ತನ್ನ ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೋಗಳನ್ನು ತೋರಿಸಿ ಬೇರೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ. ಈ ವಿಚಾರವನ್ನು ಬಾಲಕಿಯು ತನ್ನ ಮನೆಯಲ್ಲಿ ತಿಳಿಸಿದ್ದು, ಬಳಿಕ ಇಸ್ಮಾಯಿಲ್ ವಿರುದ್ಧ ದೂರು ದಾಖಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕ ಜಯಾನಂದ ಕೆ. ಅವರು ಆರೋಪಿ ವಿರುದ್ಧ ದೋಷರೋಪಣೆ ಪಟ್ಟಿ ಸಲ್ಲಿಸಿದ್ದರು. 24 ಸಾಕ್ಷಿಗಳ ಪೈಕಿ 10 ಸಾಕ್ಷಿಗಳನ್ನು ವಿಚಾರಣೆ ನಡೆಸಿದ್ದು, ಆರೋಪಿಯ ವಿರುದ್ಧ ಆರೋಪ ಸಾಬೀತಾಗಿದೆ ಎಂದ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ (ಪೋಕ್ಸೋ) ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಅವರು, ತಪ್ಪಿತಸ್ಥನಿಗೆ 3 ವರ್ಷಗಳ ಕಠಿನ ಶಿಕ್ಷೆ, 9,000 ರೂ. ದಂಡ ವಿಧಿಸಿದೆ. ಇದರಲ್ಲಿ 5,000 ರೂ. ನೊಂದ ಬಾಲಕಿಗೆ ಪರಿಹಾರವಾಗಿ ಮತ್ತು 4,000 ರೂ. ಸರಕಾರಕ್ಕೆ ಪಾವತಿಸುವಂತೆ ಆದೇಶಿಸಿದ್ದಾರೆ. ನೊಂದ ಬಾಲಕಿಗೆ ಪರಿಹಾರವಾಗಿ ಸರಕಾರದಿಂದ 25 ಸಾವಿರ ರೂ. ನೀಡುವಂತೆ ಆದೇಶಿಸಿದ್ದಾರೆ. ಸರಕಾರದ ಪರವಾಗಿ ವೈ.ಟಿ. ರಾಘವೇಂದ್ರ ವಾದಿಸಿದರು.