ಹೊಸದಿಲ್ಲಿ: ‘ಮಿ ಟೂ’ ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ವಿಶ್ವದ ನಾನಾ ಮಹಿಳೆಯರು ತಮ್ಮ ವೃತ್ತಿ ಅಥವಾ ಸಾಮಾಜಿಕ ಜೀವನದಲ್ಲಿ ಅನುಭವಿಸಿದ ಲೈಂಗಿಕ ಕಿರುಕುಳಗಳನ್ನು ಮುಕ್ತವಾಗಿ ಹಂಚಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದರ ನೆರಳಲ್ಲೇ, ಜ್ಯಾಕ್ಸನ್ ಕಾಟ್ಜ್ ಎಂಬ ಸಂಶೋಧಕರೊಬ್ಬರು ಆನ್‌ಲೈನ್ ಸಮೀಕ್ಷೆ ಆರಂಭಿಸಿದ್ದು, ಇದರಲ್ಲಿ ಪುರುಷರು, ಮಹಿಳೆಯರು ಕಿರುಕುಳದಿಂದ ತಪ್ಪಿಸಿಕೊಳ್ಳಲು ಅನುಸರಿಸುವ ಮಾರ್ಗಗಳನ್ನು ಹುಡುಕುತ್ತಾರೆ ಎಂಬ ವಿಚಾರವಾಗಿ ಮಾಹಿತಿ ಕಲೆ ಹಾಕಲಾರಂಭಿಸಿದ್ದಾರೆ. ಕುತೂಹಲದ ವಿಚಾರವೆಂದರೆ, ಈ ಬಗ್ಗೆ ಪುರುಷರು ನೀರಸ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರೆ, ಮಹಿಳೆಯರು ತಾವು ಅಂಥ ಪರಿಸ್ಥಿತಿಗಳಿಂದ ತಪ್ಪಿಸಿಕೊಳ್ಳಲು ಕಂಡುಕೊಂಡಿರುವ ಮಾರ್ಗಗಳನ್ನು ಉಲ್ಲೇಖೀಸಿದ್ದಾರೆ. ಅಂತರ್ಜಾಲದಲ್ಲಿ ಇದು ವೈರಲ್ ಆಗಿರುವ ಈ ಸಮೀಕ್ಷೆಗೆ ಸ್ಪಂದಿಸಿರುವ ಅನೇಕ ಮಹಿಳೆಯರು, ಲೈಂಗಿಕ ಕಿರುಕುಳ ನೀಡಲೆತ್ನಿಸುವ ವ್ಯಕ್ತಿಯ ಮೇಲೆ ಪ್ರಹಾರ ಮಾಡಲು ತಾವು ಬ್ಯಾಗಿನಲ್ಲಿ ಇಟ್ಟಿರುವ ಕೀಲಿ ಕೈಗಳನ್ನು ಬಳಸುವುದಾಗಿ ಹೇಳಿದ್ದರೆ, ಇನ್ನೂ ಕೆಲವರು ಪಾರ್ಟಿಗಳಲ್ಲಿ ಮಿತಿಮೀರಿ ಕುಡಿಯುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.