ಬೆಂಗಳೂರು: ಕ್ಯಾಬ್ ಚಾಲಕನಿಂದ ತನ್ನಮೇಲಾದ ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಹಿಳೆಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸಂತ್ರಸ್ತ ಮಹಿಳೆ ಸಲ್ಲಿಸಿರುವ ಅರ್ಜಿಯನ್ನು ನ್ಯಾ.ಅಲೋಕ್ ಅರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆಗೆ ಅಂಗೀಕರಿಸಿ,
ಅರ್ಜಿ ಸಂಬಂಧ ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಆಂತರಿಕ ದೂರು ಸಮಿತಿ ಮತ್ತು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿದೆ. ಜತೆಗೆ ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೂ ನೋಟಿಸ್ ಜಾರಿಗೊಳಿಸಿ ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.
“2018ರ ಆಗಸ್ಟ್‌ನಲ್ಲಿ ಕಂಪನಿಗೆ ಕ್ಯಾಬ್‌ನಲ್ಲಿ ಹೋಗುತ್ತಿದ್ದಾಗ ಅದರ ಚಾಲಕ ತನಗೆ ಕಾಣುವಂತೆ ಅಶ್ಲೀಲ ದೃಶ್ಯಗಳನ್ನು ಮೊಬೈಲ್‌ನಲ್ಲಿ ವೀಕ್ಷಿಸುತ್ತಿದ್ದ. ಜತೆಗೆ ಆತ ಹಸ್ತಮೈಥನ ಮಾಡಿಕೊಳ್ಳುತ್ತಿದ್ದ. ಈ ಬಗ್ಗೆ ಕಂಪನಿಗೆ ದೂರು ನೀಡಿದ ನಂತರ ಆ ಕಂಪನಿ ಆತನನ್ನು ಕಪ್ಪು ಪಟ್ಟಿಗೆ ಸೇರಿಸಿ, ಕೌನ್ಸೆಲಿಂಗ್ ಕೊಡಿಸುವುದಾಗಿ ಹೇಳಿತ್ತು. ನಂತರ ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಮಹಿಳೆ ಅರ್ಜಿಯಲ್ಲಿ ಹೇಳಿದ್ದಾರೆ.
ಈ ಬಗ್ಗೆ ಕಂಪನಿಗೆ ಲೀಗಲ್ ನೋಟಿಸ್ ನೀಡಿ, ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಲಾಗಿತ್ತು. ಆದರೆ ಕಂಪನಿ ಆತ ತಮ್ಮ ಕಂಪನಿಯ ಕಾಯಂ ಉದ್ಯೋಗಿಯಲ್ಲ. ಆತ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವುದರಿಂದ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿತ್ತು. ಆ ನಂತರ ಕಂಪನಿಯ ಆಂತರಿಕ ದೂರು ಸಮಿತಿಗೆ ದೂರು ನೀಡಿದ್ದು, ದೂರನ್ನು ಪುರಸ್ಕರಿಸಿಲ್ಲ. ನಿಯಮದಂತೆ ಸಮಿತಿ ತನಿಖೆ ನಡೆಸಿಲ್ಲ ಎಂದು ಆರೋಪಿಸಿ ಸಂತ್ರಸ್ತ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.