ಬೆಂಗಳೂರು: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ನಿವೃತ್ತ ಸರ್ಕಾರಿ ನೌಕರನೊಬ್ಬರನ್ನು ಸಾರ್ವಜನಿಕರು ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಗರದಲ್ಲಿ ಸಂಭವಿಸಿದೆ. ಚಂದ್ರ ಲೇಔಟ್ನ ಇಂದಿರಾ ಕಾಲೋನಿಯಲ್ಲಿ ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಾ ಲೇಔಟ್ ಠಾಣೆ ಪೊಲೀಸರು ಪೊಕ್ಸೊ ಕಾಯ್ದೆಯಡಿ ನಿವೃತ್ತ ಸರ್ಕಾರಿ ನೌಕರ ಚಿನ್ನಮಾರಯ್ಯ (62) ಎಂಬಾತನನ್ನು ಬಂಧಿಸಿದ್ದಾರೆ.
ಚಿನ್ನಮಾರಯ್ಯ ಚಂದ್ರಾಲೇಔಟ್ನ ಇಂದಿರಾ ಕಾಲೋನಿಯಲ್ಲಿ ಪತ್ನಿ ಮತ್ತು ಮೂವರು ಮಕ್ಕಳ ಜತೆ ನೆಲೆಸಿದ್ದು, ಈ ಮನೆಯ ಪಕ್ಕದಲ್ಲೇ ಸಂತ್ರಸ್ತ ಬಾಲಕಿಯ ಮನೆಯೂ ಇದೆ. ಬಾಲಕಿಯ ಪೋಷಕರು ಚಿನ್ನಮಾರಯ್ಯನಿಗೆ ಪರಿಚಿತರಾಗಿದ್ದು, ಅವರ ಮನೆಗೂ ಹೋಗುತ್ತಿದ್ದ ಎನ್ನಲಾಗಿದೆ.
ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಾಲಕಿಯ ತಾಯಿ ಮಾರುಕಟ್ಟೆಗೆ ಹೋಗಿದ್ದು, ಇದನ್ನು ಗಮನಿಸಿದ ಚಿನ್ನಮಾರಯ್ಯ ಏಕಾಏಕಿ ಆ ಮನೆಗೆ ನುಗ್ಗಿ ಒಳಗಿನಿಂದ ಬಾಗಿಲು ಹಾಕಿಕೊಂಡು ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ ಎನ್ನಲಾಗಿದೆ. ಇದರಿಂದ ಆತಂಕಗೊಂಡ ಬಾಲಕಿ ಜೋರಾಗಿ ಕಿರುಚಿಕೊಂಡಿದ್ದಳು. ಈ ಕಿರುಚಾಟ ಕೇಳಿದ ಸ್ಥಳೀಯರು ಮನೆಗೆ ಬಂದು ನೋಡಿದಾಗ ಚಿನ್ನಮಾರಯ್ಯನ ಕೃತ್ಯ ಬೆಳಕಿಗೆ ಬಂದಿದೆ.
ಕೂಡಲೇ ಬಾಗಿಲು ಒಡೆದು ಒಳನುಗ್ಗಿದ ಸ್ಥಳೀಯರು ಬಾಲಕಿಯನ್ನು ಚಿನ್ನಮಾರಯ್ಯನಿಂದ ಪಾರು ಮಾಡಿದರಲ್ಲದೆ, ಆತನಿಗೆ ಮನಬಂದಂತೆ ಥಳಿಸಿ ಚಂದ್ರಾ ಲೇಔಟ್ ಪೊಲೀಸ್ ಠಾಣೆಗೆ ಕರೆದೊಯ್ದರು. ಪರಿಶೀಲನೆ ನಡೆಸಿದ ಪೊಲೀಸರು ಆರೋಪಿಯ ವಿರುದ್ಧ ಪೊಕ್ಸೊ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.