Advertisement

ಬಾಲಕನಿಗೂ ಲೈಂಗಿಕ ಕಿರುಕುಳ!

11:23 AM Feb 24, 2017 | Team Udayavani |

ಬೆಂಗಳೂರು: ಮಾರತ್‌ಹಳ್ಳಿ ಠಾಣಾ ಸರಹದ್ದಿನ ಖಾಸಗಿ ನರ್ಸರಿ ಶಾಲೆಯೊಂದರಲ್ಲಿ ಮೂರುವರೆ ವರ್ಷದ ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. 

Advertisement

ಪ್ರಕರಣದಲ್ಲಿ ಬಂಧಿತನಾಗಿರುವ ಶಾಲೆಯ ಸೂಪರ್‌ವೈಸರ್‌ ಮಂಜುನಾಥ್‌ ಬಾಲಕಿಯರ ಮಾತ್ರವಲ್ಲದೇ, ಎರಡೂವರೆ ವರ್ಷದ ಬಾಲಕನ ಮೇಲೂ ಲೈಂಗಿಕ ದೌರ್ಜನ್ಯವೆಸಗಿರುವ ಸಂಗತಿಯೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಬಾಲಕನ ಪೋಷಕರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಆರೋಪಿ ಮಂಜುನಾಥ್‌ ಮೂರುವರೆ ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಪೊಕೊ ಕಾಯ್ದೆಯಡಿ ಫೆ.21 ರಂದು ಬಂಧಿಸಿದ್ದರು. ಪ್ರಕರಣದ ಬಳಿಕ ಪೋಷಕರು ತಮ್ಮ ಮಕ್ಕಳನ್ನು ಪ್ರಶ್ನಿಸಿದ್ದು, ಆತನ ಅನುಚಿತ ವರ್ತನೆ ಬಗ್ಗೆ ಒಂದೊಂದೆ ಮಾಹಿತಿಗಳು ಹೊರ ಬರುತ್ತಿವೆ. ಈಗಾಗಲೇ ಆರೋಪಿ ವಿರುದ್ಧ ಪ್ರತ್ಯೇಕವಾಗಿ ಆರು ಪ್ರಕರಣ ದಾಖಲಾಗಿದ್ದು, ಈ ಪೈಕಿ ಬಾಲಕನ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಕೂಡ ಸೇರಿದೆ.

“ಘಟನೆ ನಡೆದ ಖಾಸಗಿ ನರ್ಸರಿ ಶಾಲೆಯಲ್ಲಿ ನನ್ನ ಎರಡೂವರೆ ವರ್ಷದ ಮಗ ಹೋಗುತ್ತಿದ್ದಾನೆ. ಘಟನೆ ಬಳಿಕ ಮಗನನ್ನು ಪ್ರಶ್ನಿಸಿದೆ. ಬಾಲಕರು ಗಲಾಟೆ ಮಾಡಿದರೆ, ಅವರ ಖಾಸಗಿ ಸ್ಥಳಗಳಿಗೆ ಹೊಡೆಯುವುದು, ಕೈಯಿಂದ ಚಿವುಟುವುದನ್ನು ಮಂಜು ಮಾಡುತ್ತಿದ್ದ ಎಂದು ನನ್ನ ಮಗ ಹೇಳಿದ. ಹೀಗಾಗಿ ಆತನ ವಿರುದ್ಧ ಮಾರತ್‌ಹಳ್ಳಿಯಲ್ಲಿ ದೂರು ದಾಖಲಿಸಿದ್ದೇನೆ,” ಎಂದು ಬಾಲಕನ ಪೋಷಕರು “ಉದಯವಾಣಿ’ಗೆ ತಿಳಿಸಿದರು. ಇಂತಹವರಿಂದ ಇಡೀ ಸಮಾಜಕ್ಕೆ ಕೆಟ್ಟ ಹೆಸರು, ಆತನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ಆಗ್ರಹಿಸಿದರು. 

ಆರು ಎಫ್ಐಆರ್‌: ಇನ್ನೂ ಘಟನೆ ಸಂಬಂಧ ಐವರು ಬಾಲಕಿಯರು ಮತ್ತು ಬಾಲಕನೊಬ್ಬನ ಪೋಷಕರು ನೀಡಿದ ದೂರಿನ ಮೇರೆಗೆ ಆರೋಪಿ ಮಂಜುನಾಥ್‌ ವಿರುದ್ಧ ಆರು ಎಫ್ಐಆರ್‌ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಜತೆಗೆ ಶಾಲೆಯ ಆಡಳಿತ ಮಂಡಳಿ ವಿರುದ್ಧ ಕೂಡ ಪೊಕೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ನಗರ ಹೆಚ್ಚುವರಿ ಪೊಲೀಸ್‌ ಆಯುಕ್ತ ಹೇಮಂತ್‌ ನಿಂಬಾಳ್ಕರ್‌ ಹೇಳಿದ್ದಾರೆ.

Advertisement

ಶಾಲೆಗಳ ಮೇಲೆ ಸಮುದಾಯ ಪೊಲೀಸ್‌ ಹದ್ದಿನ ಕಣ್ಣು: ಘಟನೆ ಹಿನ್ನೆಲೆಯಲ್ಲಿ ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ನಾರಾಯಣ್‌ ನೇತೃತ್ವದಲ್ಲಿ ಗುರುವಾರ ಮಾರತ್‌ಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರನ್ನೊಳಗೊಂಡ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಪಾಲ್ಗೊಂಡಿದ್ದರು. ಸಭೆಯಲ್ಲಿ ನಿವೃತ್ತ ಸೈನಿಕರು, ಬ್ಯಾಂಕ್‌ ಅಧಿಕಾರಿಗಳನ್ನೊಳಗೊಂಡ “ಸಮುದಾಯ ಪೊಲೀಸ್‌’ ಸಮಿತಿ ರಚಿಸಲಾಯಿತು.

ಇವರಿಗೆ ಆಯಾ ಠಾಣಾ ವ್ಯಾಪ್ತಿಯಿಂದ ಪತ್ರ ನೀಡಲಾಗಿರುತ್ತದೆ. ಇವರು ಪತ್ರಗಳನ್ನು ಹಿಡಿದು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಪೋಷಕರಿಂದ ಮಾಹಿತಿ ಪಡೆದು ಪೊಲೀಸರಿಗೆ ಮಾಹಿತಿ ನೀಡುವ ಅಧಿಕಾರವಿರಲಿದೆ. ಯಾವುದೇ ಅಪರಾಧ ಕೃತ್ಯಗಳನ್ನು ನಡೆದರೂ ಸಮುದಾಯ ಪೊಲೀಸ್‌ ಸಮಿತಿಯಲ್ಲಿರುವವರು ಪ್ರಶ್ನಿಸಿ ಪೊಲೀಸರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಾರೆ ಎಂದು ಡಿಸಿಪಿ ತಿಳಿಸಿದರು.

ಸಿಡಿ, ಪೆನ್‌ಡ್ರೈವ್‌ ಪತ್ತೆ!
ಪೊಲೀಸರು ಗುರುವಾರ ಆರೋಪಿಯ ಮನೆ ಶೋಧಿಸಿದ್ದು, ಈ ವೇಳೆ ಎರಡು ಸಿಡಿ, ಪೆನ್‌ಡ್ರೈವ್‌ ಹಾಗೂ ಒಂದು ಮೊಬೈಲ್‌ ಪತ್ತೆಯಾಗಿದೆ. ಇವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತನಿಖಾಧಿಕಾರಿ ತಿಳಿಸಿದರು. ಈತನ ವಿರುದ್ಧ ಆರು ಎಫ್ಐಆರ್‌ಗಳು ದಾಖಲಾಗಿದ್ದು, ಪ್ರತಿಯೊಂದನ್ನು ಪ್ರತ್ಯೇಕವಾಗಿ ತನಿಖೆ ನಡೆಲಾಗುವುದೆಂದು ಡಿಸಿಪಿ ನಾರಾಯಣ್‌ ಹೇಳಿದ್ದಾರೆ. 

ಘಟನೆ ಸಂಬಂಧ ಆರೋಪಿ ಮತ್ತು ಶಾಲೆಯ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಸಹ ಕಾರ್ಯಪ್ರವೃತ್ತರಾಗಿ ಶಾಲೆಯ ಮೇಲೆ ಕ್ರಮಜರುಗಿಸಬೇಕು.
-ಪ್ರವೀಣ್‌ ಸೂದ್‌, ನಗರ ಪೊಲೀಸ್‌ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next