ಕಲಬುರಗಿ: ಕಾಮವನ್ನು ಒಂದು ಶಾಸ್ತ್ರದಂತೆ ಅಭ್ಯಾಸ ಮಾಡಬೇಕು. ಆಗ ಲೈಂಗಿಕತೆ ಬಗ್ಗೆ ಇರುವ ಅನುಮಾನಗಳನ್ನು ದೂರ ಮಾಡಬಹುದು ಎಂದು ಖ್ಯಾತ ವೈದ್ಯ ನಾ. ಸೋಮೆಶ್ವರ ಹೇಳಿದರು. ನಗರದ ಸರ್ಕಾರಿ ಸ್ವಾಯತ್ತ ಪದವಿ ಮಹಾವಿದ್ಯಾಲಯದಲ್ಲಿ ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್, ವಿಕಾಸ ಅಕಾಡೆಮಿ ಹಾಗೂ ಸರ್ಕಾರಿ ಮಹಾವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಲೈಂಗಿಕ ಸ್ವತ್ಛತಾ ಆಪ್ತ ಸಮಾಲೋಚನೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲೈಂಗಿಕತೆಯನ್ನು ಮಡಿವಂತಿಕೆ ವಿಚಾರದಿಂದ ಬೇರ್ಪಡಿಸಿ ನೋಡಿದಾಗ ಮಾತ್ರ ಅದರ ಕುರಿತು ಸ್ಪಷ್ಟ ಅರಿವು ಹೊಂದಬಹುದು. ಅದಕ್ಕಾಗಿ ಔಪಚಾರಿಕವಾಗಿ ಶಿಕ್ಷಣ ಕೊಡುವ ಪದ್ಧತಿ ಬರಬೇಕು ಎಂದು ಹೇಳಿದರು.
ಲೈಂಗಿಕ ವಿಷಯದ ಕುರಿತು ನಮ್ಮ ಜನರಲ್ಲಿ ತಿಳಿವಳಿಕೆ ಇಲ್ಲ. ಅದು ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಕ್ರಿಯೆ. ಅದರ ಬಗ್ಗೆ ಬಹಿರಂಗವಾಗಿ ಚರ್ಚೆಯಾದರೆ, ಸಮಾಜ ಮಾತನಾಡುವವರ ಬಗ್ಗೆ ಕೀಳಾಗಿ ಕಾಣಲು ಆರಂಭಿಸುತ್ತದೆ. ಈ ವ್ಯವಸ್ಥೆ ಬದಲಾಗಿ ಹೊಸ ಪದ್ಧತಿ ಜಾರಿಗೆ ಬರಬೇಕು ಎಂದು ಹೇಳಿದರು.
ಮಕ್ಕಳಿಗೆ ಬಾಲ್ಯದಲ್ಲಿಯೇ ಜನನಾಂಗ ಸ್ವತ್ಛತೆಗಳ ಬಗ್ಗೆ ಪಾಲಕರು ಹೇಳಿ ಕೊಡಬೇಕು. ಹೀಗೆ ಹೇಳಿ ಕೊಟ್ಟರೆ ಅವರು ಮುಂದೆ ಬರುವ ಮಾರಕ ರೋಗಗಳಿಂದ ದೂರವಿದ್ದು ಉತ್ತಮ ಆರೋಗ್ಯ ಪಡೆಯಬಹುದು ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕ ಮಾತನಾಡಿದ ಡಾ| ಎಸ್. ಎಸ್. ಹಿರೇಮಠ, ಉತ್ತರ ಭಾರತದಲ್ಲಿ ಹೆಚ್ಚಾಗಿ ಲೈಂಗಿಕತೆ ಅರಿವು ಇಲ್ಲದೇ ಇರುವುದರಿಂದ ಏಡ್ಸನಂತಹ ಮಾರಕ ರೋಗಗಳು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿವೆ. ಅಲ್ಲಿ ಹೆಣ್ಣನ್ನು ಲೈಂಗಿಕ ಬೊಂಬೆ ಎಂದು ಭಾವಿಸಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸರ್ಕಾರದ ಮಟ್ಟದಲ್ಲಿ ಅಶ್ಲೀಲ ವೆಬ್‌ಸೈಟ್ ನಿಷೇಧವಾಗಿದ್ದರೂ ಭಾರತದಲ್ಲಿ ಇನ್ನೂ 820 ವೆಬ್‌ಸೈಟ್‌ಗಳು ಕಾರ್ಯನಿರತವಾಗಿವೆ. ಪ್ರತಿನಿತ್ಯ 150 ಮಿಲಿಯನ್ ಜನ ಅವುಗಳನ್ನು ವೀಕ್ಷಣೆ ಮಾಡುತ್ತಾರೆ ಎಂದು ಇತ್ತೀಚಿಗೆ ವರದಿಗಳು ಬಹಿರಂಗಪಡಿಸಿವೆ ಎಂದು
ಹೇಳಿದರು.
ತರಬೇತಿ ಆರಂಭಕ್ಕೂ ಮುನ್ನ ಅಗಲಿದ ಚೇತನಗಳಾದ ಡಾ| ಅಂಬರೀಶ, ಸಿ. ಕೆ.ಜಾಫರ್ ಷರೀಫ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ| ಎಸ್. ಎಸ್. ಗುಬ್ಬಿ, ಡಾ| ವೀಣಾ ವಿಕ್ರಮ ಸಿದ್ದಾರೆಡ್ಡಿ, ಉಮೇಶ ಶೆಟ್ಟಿ , ಡಾ| ಶಶಿಶೇಖರ ರೆಡ್ಡಿ ಭಾಗವಹಿಸಿದ್ದರು. ನಾಗರಾಜ ಕುಲಕರ್ಣಿ ಸ್ವಾಗತಿಸಿದರು. ಡಾ| ಮಂಜುನಾಥ ರೆಡ್ಡಿ ನಿರೂಪಿಸಿದರು. ಕಾಲೇಜಿನ ಪ್ರಭಾರಿ ಡಾ| ಟಿ. ಗುರುಬಸಪ್ಪ ಅಧ್ಯಕ್ಷತೆ ವಹಿಸಿದ್ದರು.