ಬೆಳ್ತಂಗಡಿ: ಇನ್ನೇನು ಮಳೆಗಾಲ ಸಮೀಪಿಸುತ್ತಿದೆ. ಮಳೆ ಆಶ್ರಿತ ಕರಾವಳಿಯಲ್ಲಿ ಈವರೆಗೆ ಚರಂಡಿಗಳ ಸಮರ್ಪಕ ರೂಪುರೇಷೆ ನಡೆದಿಲ್ಲ. ಇದು ಬೆಳ್ತಂಗಡಿ ಪ.ಪಂ. ಗೂ ಅನ್ವಯಿಸುತ್ತದೆ. ಕಾರಣ ಮಳೆಗಾಲ ಸಮೀಪಿಸಿದರೂ ಚರಂಡಿಗಳ ಹೂಳು ತೆರವು ಸಹಿತ, ರಸ್ತೆಯ ಸಿಸಿ ಚರಂಡಿಗೆ ಮಲಿನ ನೀರು ಬಿಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗುತ್ತಿಲ್ಲ. ಬೆಳ್ತಂಗಡಿ ಪ.ಪಂ. ವ್ಯಾಪ್ತಿಯಲ್ಲಿ ಪ್ರಮುಖವಾಗಿ ರಾಜಕಾಲುವೆಗಳ ನಿರ್ವಹಣೆಯೇ ನಡೆದಿಲ್ಲ. ಪ್ರತೀ ವರ್ಷ ಚರಂಡಿಗಳ ಹೂಳು ತೆರವು ಹಾಗೂ ಮಳೆಗಾಲದ ಬಳಿಕ ಜಂಗಲ್ ಕಟ್ಟಿಂಗ್ ನಡೆಸುವ ಸಲುವಾಗಿ 12 ಲಕ್ಷ ರೂ. ಅನುದಾನ ಇರಿಸಲಾಗುತ್ತಿದೆ. ಆದರೆ ಸಿಸಿ ಚರಂಡಿಗಳ ಕಸಕಡ್ಡಿ ತೆರವು ಬಿಟ್ಟರೆ ಉಳಿದ ಕಡೆ ಚರಂಡಿಗಳೆ ನಿರ್ಮಾಣಗೊಂಡಿಲ್ಲ.
ಮಳೆಗಾದಲ್ಲಿ ನೀರು ರಸ್ತೆಯಲ್ಲೇ ಹಾದು ಹೋಗುವುದರಿಂದ ರಸ್ತೆಗಳೂ ಹಾಳಾಗುತ್ತಿವೆ. ಕೆಲವು ಸಿಸಿ ಚರಂಡಿಗಳಿಗೆ ನೇರವಾಗಿ ಹೊಟೇಲ್ ಹಾಗೂ ಮನೆಗಳ ತ್ಯಾಜ್ಯ ನೀರು ಬಿಡ ಲಾಗುತ್ತಿದೆ. ಬೆಳ್ತಂಗಡಿ ತಾಲೂಕಿನ ಕೇಂದ್ರವಾಗಿರುವ ಮಿನಿವಿಧಾನ ಸೌಧದ ಎದುರುಭಾಗದಲ್ಲೆ ಇಂತಹ ಅವ್ಯವಸ್ಥೆ ಕಣ್ಣಿಗೆ ರಾಚುತ್ತದೆ. ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಈವರೆಗೆ ಟೌನ್ ಪ್ಲ್ರಾನ್ ಇಲ್ಲದ್ದರಿಂದ ಯಾವುದೇ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ. ಇಷ್ಟೇ ಯಾಕೆ ಆರೋಗ್ಯ ಇಲಾಖೆಯೊಳಗಿನ ಸಿಬಂದಿ ಆರೋಗ್ಯವನ್ನೇ ಪಣಕ್ಟಿಟ್ಟ ಪರಿಸ್ಥಿತಿಯಿದೆ. ತಾಲೂಕು ಆಸ್ಪತ್ರೆ ಆವರಣದಲ್ಲಿರುವ ಸಿಬಂದಿ ವಸತಿ ಗೃಹದ ಹಿಂಬದಿ ಚರಂಡಿಯಲ್ಲಿ ಆರೋಗ್ಯ ಇಲಾಖೆಯ ತ್ಯಾಜ್ಯ ನೀರು ಪ್ರತಿನಿತ್ಯ ಹರಿಯುತ್ತಿದೆ. ಈ ಕುರಿತು ಯಾವುದೇ ಕ್ರಮವಹಿಸಿಲ್ಲ.
ತೆರೆದ ಚರಂಡಿಯಲ್ಲೇ ಮಲಿನ ನೀರು ಹೋಗಿ ಸಮೀಪದ ರಸ್ತೆಯ ಚರಂಡಿಗೆ ಸೇರುತ್ತಿದೆ. ಪರಿಣಾಮ ದುರ್ನಾತ ಬೀರುವುದಲ್ಲದೆ ಸೊಳ್ಳೆಗಳ ಉತ್ಪಾದನ ಕೇಂದ್ರವಾಗಿದೆ. ಆರೋಗ್ಯ ಇಲಾಖೆಯು ಈಗಾಗಲೇ ಮಳೆಗಾಲ ಪೂರ್ವ ಲಾರ್ವ ಸಮೀಕ್ಷೆ, ಸೊಳ್ಳೆಗಳ ಉತ್ಪಾದನ ಸ್ಥಾನವನ್ನು ಹುಡುಕಿ ನಾಶ ಮಾಡುವ ಪ್ರಕ್ರಿಯೆಗೆ ಮುಂದಾಗಿದೆ. ಆದರೆ ಆರೋಗ್ಯ ಇಲಾಖೆ ಆವರಣದಲ್ಲೇ ಇಂತಹ ಸ್ಥಿತಿ ಇರುವುದು ವಿಪರ್ಯಾಸ. ಪಟ್ಟಣ ಪಂಚಾಯತ್‌ಗೆ ಸಂಬಂಧಿಸಿದಂತೆ ಸಂಜಯನಗರ ಕಾರಂತ್ಯಾರು ಬೈಲು ರಾಜಕಾಲುವೆ, ಕುತ್ಯಾರು ದೇವಸ್ಥಾನದ ಬಳಿ ರಾಜಕಾಲುವೆ, ಉದಯನಗರ ಬಿಷಪ್ ಹೌಸ್ ಬಳಿ ಹಾದು ಹೋಗುವ ರಾಜಕಾಲುವೆ, ಒಂದನೇ ವಾರ್ಡ್ ಕೆಲ್ಲಕೆರೆ ರಸ್ತೆ ಬದಿ ರಾಜಕಾಲುವೆ, ಪ.ಪಂ. ಗಡಿಪ್ರದೇಶದ ರಾಜಕಾಲುವೆಗಳು ಕಸಕಡ್ಡಿ ತುಂಬಿ ನಿಂತಿವೆ.
ಮಳೆಗಾಲದಲ್ಲಿ ಮನೆಗಳಿಗೆ ನೀರು
ಕೆಲ್ಲಕೆರೆ-ಮೇಲಂತಬೆಟ್ಟು ಸಮೀಪ ರಸ್ತೆ ಬದಿ ಚರಂಡಿ ದುರಸ್ತಿ ಕಾರ್ಯ ನಡೆಸಿಲ್ಲ. ಮಳೆಗಾಲದಲ್ಲಿ ಈ ಪ್ರದೇಶದ ಮನೆಗಳಿಗೆ ನೀರು ನುಗ್ಗುತ್ತಿವೆ. ಗುರುದೇವ ಪ.ಪೂ. ಕಾಲೇಜಿಗೆ ತೆರಳುವ ರಸ್ತೆಯಲ್ಲಿ ಶೋರೂಮ್‌ನಿಂದ ಬಿಡುವ ಮಲಿನ ನೀರು ನೇರವಾಗಿ ಚರಂಡಿ ಸೇರುತ್ತಿದೆ. ಮಳೆಗಾಲದ ಮುನ್ನ ಪ.ಪಂ. ವ್ಯಾಪ್ತಿಯ ಸಿಸಿ ಚರಂಡಿ ಹೂಳು ತೆರವು ಕಾರ್ಯ ನಡೆಸಿ ಮಲಿನ ನೀರು ಚರಂಡಿಗೆ ಬಿಡುವುದನ್ನು ತಡೆಯಲು ಪಟ್ಟಣ ಪಂಚಾಯತ್ ಅಗತ್ಯ ಕ್ರಮ ವಹಿಸಬೇಕಿದೆ.