ಗುಂಡ್ಲುಪೇಟೆ: ಪಟ್ಟಣ ವ್ಯಾಪ್ತಿಯ ಹೆದ್ದಾರಿ ರಸ್ತೆಯ ಗುರುಪ್ರಸಾದ್ ಹೋಟೆಲ್ ಪಕ್ಕದಲ್ಲಿ ನಿರ್ಮಿಸಿರುವ ಚರಂಡಿಯಲ್ಲಿ ಈಚರ್ ವಾಹನದ ಚಕ್ರ ಸಿಲುಕಿದ ಹಿನ್ನೆಲೆ ಕೆಲ ಕಾಲ ಸಂಚಾರಕ್ಕೆ ತೊಂದರೆ ಉಂಟಾಯಿತು. ಇದರಿಂದ ಚರಂಡಿ ಕಾಮಗಾರಿ ಕಳಪೆಯಿಂದ ನಿರ್ಮಾಣ ಮಾಡುವುದು ಜಗಜ್ಜಾಹೀರವಾಗಿದೆ.
ಕಬ್ಬಿಣದ ಸರಳುಗಳನ್ನು ತುಂಬಿದ ಈಚರ್ ಚರಂಡಿ ಮೇಲೆ ಹತ್ತಿದ ಪರಿಣಾಮ ಚರಂಡಿ ಕುಸಿದು ಹಿಂಬದಿ ಚಕ್ರ ಸಿಲುಕಿಕೊಂಡಿತು. ಚರಂಡಿಯನ್ನು ಕಳಪೆಯಿಂದ ನಿರ್ಮಾಣ ಮಾಡಿರುವ ಹಿನ್ನೆಲೆ ಈ ಹಿಂದೆ ಹಲವು ಪ್ರಕರಣಗಳು ನಡೆದಿದೆ. ಇದರಿಂದ ಫುಟ್‌ಪಾತ್ ರಸ್ತೆ ಯಲ್ಲಿ ಪಾದಾಚಾರಿಗಳು ಸಂಚರಿಸಲಾಗದ ಪರಿಸ್ಥಿತಿ ಇದೆ.
ಈಗಾಗಲೇ ಪಟ್ಟಣದ ಹೆದ್ದಾರಿ ರಸ್ತೆ ವ್ಯಾಪ್ತಿಯಲ್ಲಿ ಸುಮಾರು 40ಕ್ಕೂ ಅಧಿಕ ಕಡೆ ಚರಂಡಿ ಕುಸಿತ ಕಂಡಿದ್ದರೂ ಸಹ ಸ್ಥಳೀಯ ಪುರಸಭೆ ಆಡಳಿತ ವರ್ಗ ಹಾಗೂ ಅಧಿಕಾರಿಗಳು, ಕ್ಷೇತ್ರದ ಶಾಸಕ ಸಿ.ಎಸ್. ನಿರಂಜನಕುಮಾರ್ ಚರಂಡಿ ನಿರ್ಮಿಸಿದ ಗುತ್ತಿಗೆದಾರನ ವಿರುದ್ಧ ಯಾವುದೇ ಕ್ರಮ ವಹಿಸಿಲ್ಲ. ಜೊತೆಗೆ ಕುಸಿತ ಚರಂಡಿಯನ್ನು ದುರಸ್ತಿ ಪಡಿಸುವ ಗೋಜಿಗೆ ಹೋಗಿಲ್ಲ. ಇದು ಸಾರ್ವಜನಿಕ ವಲಯ ದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಶಾಸಕರೇ ಇತ್ತ ಗಮನಿಸಿ: ಕಳಪೆಯಿಂದ ಚರಂಡಿ ನಿರ್ಮಾಣವಾಗಿರುವ ಹಿನ್ನೆಲೆ ಚರಂಡಿ ಮೇಲೆ ಖಾಲಿ ವಾಹನಗಳು ಸಹ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಇನ್ನೂ ಪಾದಾಚಾರಿಗಳಂತು ಜೀವ ಕೈಯಲ್ಲಿಡಿರುವ ಓಡಾಡಬೇಕಾಗ ಪರಿಸ್ಥಿತಿ ಇದೆ. ಆದ್ದರಿಂದ ದೊಡ್ಡ ಪ್ರಮಾಣದ ಅನಾಹುತ ಸಂಭವಿಸುವ ಮೊದಲೇ ಎಚ್ಚೆತ್ತು ಶಾಸಕರು ಚರಂಡಿಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿಸುವಂತೆ ಕಸ್ತೂರಿ ಕರ್ನಾಟಕ ನ್ಯಾಯಪರ ವೇದಿಕೆ ತಾ. ಅಧ್ಯಕ್ಷ ರಂಗಪ್ಪನಾಯಕ ಒತ್ತಾಯಿಸಿದ್ದಾರೆ.