Advertisement

ದೇವಸ್ಥಾನದ ಬಳಿ ದುರ್ವಾಸನೆ ಬೀರಿದ ಕೊಳಚೆ ನೀರು

12:30 AM Mar 16, 2019 | Team Udayavani |

ಕಾಪು: ಕಾಪು ಪುರಸಭೆಯ ತೆಂಕಪೇಟೆ ಮತ್ತು ಜನಾರ್ದನ ದೇವಸ್ಥಾನದ ಮುಂಭಾಗದಲ್ಲಿ ಒಳಚರಂಡಿ ಯೋಜನೆಗೆಂದು ಹಾಕಲಾಗಿದ್ದ ಪೈಪ್‌ಲೈನ್‌ಗೆ ಪುರಸಭೆಯ ಅನುಮತಿಯಿಲ್ಲದೇ ಮನೆ ಮತ್ತು ವಾಣಿಜ್ಯ ಕಟ್ಟಡಗಳ ಮಲಿನ ನೀರನ್ನು ಏಕಾಏಕಿಯಾಗಿ ಬಿಟ್ಟ ಪರಿಣಾಮ ಗುರುವಾರ ರಾತ್ರಿ ಕಾಪು ಪೇಟೆಯ ಜನರು  ದುರ್ನಾತದ ಪರಿಸ್ಥಿತಿಯನ್ನು ಎದುರಿಸುವಂತಾಯಿತು.

Advertisement

ಚಿಮ್ಮಿದ ಕೊಳಚೆ ನೀರು
ಹಳೇ ಮಾರಿಯಮ್ಮ ದೇವಸ್ಥಾನದ ಮುಂಭಾಗದಲ್ಲಿ ಕಾಪು ಪೇಟೆಯನ್ನು ಪ್ರವೇಶಿಸುವ ದ್ವಾರದಿಂದ ಹಿಡಿದು ಮಲ್ಲಾರು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದವರೆಗಿನ ಜನರು ಇದರಿಂದಾಗಿ ಅಸಹನೀಯ ಪರಿಸ್ಥಿತಿಯನ್ನು ಎದುರಿಸುವಂತಾಯಿತು. ಒಳಚರಂಡಿಯಲ್ಲಿ ಕೊಳಚೆ ನೀರು ಒಮ್ಮೆಲೆ ಹರಿದು ಬಂದ ಪರಿಣಾಮ ಅಲ್ಲಲ್ಲಿ ಅಳವಡಿಸಲಾಗಿದ್ದ ಮ್ಯಾನ್‌ಹೋಲ್‌ಗ‌ಳಲ್ಲಿ ಕೊಳಚೆ ನೀರು ಮೇಲೆದ್ದು ಬಂದು ಕೆಟ್ಟ ದುರ್ವಾಸನೆ ಬೀರಿದೆ.

ಪುರಸಭೆಗೆ ದೂರು
ಗುರುವಾರ ಸಂಜೆ ಕಂಡು ಬಂದ ಮಲಿನ ನೀರು ಮತ್ತು  ದುರ್ವಾಸನೆಯ ಸ್ಥಿತಿಯನ್ನು ಗಮನಿಸಿದ ಪುರಸಭಾ ಸದಸ್ಯ ಅನಿಲ್‌ ಕುಮಾರ್‌ ಮತ್ತು ಸ್ಥಳೀಯ ನಿವಾಸಿಗಳು ಈ ಬಗ್ಗೆ  ಪುರಸಭೆಗೆ ದೂರು ನೀಡಿದ್ದರು. ಶುಕ್ರವಾರ ಬೆಳಗ್ಗೆಯೇ ಈ ಬಗ್ಗೆ ಕಾರ್ಯೋನ್ಮುಖರಾದ ಮುಖ್ಯಾಧಿಕಾರಿ  ಅವರು ಪುರಸಭೆಯ ಸಿಬಂದಿಗಳು, ಪೌರ ಕಾರ್ಮಿಕರು ಮತ್ತು ಒಳಚರಂಡಿ ಯೋಜನೆಯ ಗುತ್ತಿಗೆದಾರ ಸಿಬಂದಿಗಳನ್ನು ಬಳಸಿಕೊಂಡು ತುರ್ತು ಕಾರ್ಯಾಚರಣೆ ನಡೆಸಿದರು.

ಪೈಪ್‌ಲೈನ್‌ ಸಂಪರ್ಕ ಕಡಿತ
ಕಾರ್ಯಾಚರಣೆ ವೇಳೆ ಕೆಲವು ಕಡೆಗಳಲ್ಲಿ ಪುರಸಭೆಯ ಒಪ್ಪಿಗೆಯಿಲ್ಲದೇ ಪುರಸಭೆಯ ಒಳಚರಂಡಿ ಯೋಜನೆಯ ಮ್ಯಾನ್‌ಹೋಲ್‌ಗೆ ಕಲುಷಿತ ಮಲಿನ ನೀರನ್ನು ಬಿಡುತ್ತಿರುವುದನ್ನು ಪತ್ತೆ ಹಚ್ಚಿದ  ಸ್ವತ್ಛ ಸರ್ವೇಕ್ಷಣಾ ತಂಡ ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡಿ, ಅನುಮತಿಯಿಲ್ಲದೇ ಮ್ಯಾನ್‌ಹೋಲ್‌ಗೆ ಜೋಡಿಸಿರುವ ಪೈಪ್‌ಲೈನ್‌ ಸಂಪರ್ಕವನ್ನು 
ಕಡಿತಗೊಳಿಸಿದೆ.

ಪುರಸಭೆ ವ್ಯಾಪ್ತಿಯ ನಾಗರಿಕರ ಆರೋಗ್ಯದ ಹಿತದೃಷ್ಟಿ ಮತ್ತು ಪರಿಸರದ ಹಿತದೃಷ್ಟಿಯನ್ನು ಗಮನದಲ್ಲಿ ಇರಿಸಿಕೊಂಡು ಪ್ರತಿಯೊಂದು ವಾಣಿಜ್ಯ ಮಳಿಗೆ, ಹೊಟೇಲ್‌, ಮನೆ ಸಹಿತ ಎಲ್ಲಾ ಮಾದರಿಯ ಕಟ್ಟಡಗಳಲ್ಲೂ ಅಲ್ಲಿ ಉತ್ಪ³ತ್ತಿಯಾಗುವ ಮಲಿನ ಮತ್ತು ಕಲುಷಿತ ನೀರನ್ನು ಎಸ್‌ಟಿಪಿ ತಂತ್ರಜ್ಞಾನದ ಮೂಲಕ ಶುದ್ಧೀಕರಿಸಿ ತಾವೇ ಅದರ ವಿಲೇವಾರಿಗೆ ಕ್ರಮ ತೆಗೆದುಕೊಳ್ಳಬೇಕಿದೆ. ಒಂದು ವೇಳೆ ಇನ್ನು ಮುಂದೆಯೂ ಇದೇ ರೀತಿಯಲ್ಲಿ ಒಳಚರಂಡಿ ಯೋಜನೆಯ ಮ್ಯಾನ್‌ಹೋಲ್‌ಗೆ ಮಲಿನ ನೀರನ್ನು ಬಿಟ್ಟಲ್ಲಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪುರಸಭಾ ಮುಖ್ಯಾಧಿಕಾರಿ ರಾಯಪ್ಪ ಎಚ್ಚರಿಕೆ ನೀಡಿದ್ದಾರೆ.

Advertisement

ಯೋಜನೆ ಅನುಷ್ಠಾನಕ್ಕೆ ಜಾಗದ ಕೊರತೆ
ಕಾಪು ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಶುದ್ಧೀಕರಣ ಘಟಕ ಸ್ಥಾಪನೆಗೆ ಈಗಾಗಲೇ ಮೂರು ಕೋ. ರೂ. ಅನುದಾನ ಬಿಡುಗಡೆಯಾಗಿದ್ದು, ಅದನ್ನು ಬಳಸಿಕೊಂಡು ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಕೆಲವೊಂದು ಅಡಚಣೆಗಳು ಎದುರಾಗಿವೆ. ಒಳಚರಂಡಿ ಯೋಜನೆಗಾಗಿ ಪೈಪ್‌ಲೈನ್‌ ಅಳವಡಿಕೆಯಾಗಿದ್ದರೂ ಕೂಡಾ ಸಮರ್ಪಕ ಜಾಗದ ಕೊರತೆಯಿಂದಾಗಿ ಎಸ್‌ಟಿಪಿ ಘಟಕ ಸ್ಥಾಪಿಸಲು ವಿಳಂಬವಾಗುತ್ತಿದೆ. ಪುರಸಭೆ ವತಿಯಿಂದ ಒಂದು ಎಕರೆ ಖಾಸಗಿ ಜಾಗವನ್ನು ಖರೀದಿಸಿ, ಬೆಂಗಳೂರಿನ ದೇವನಹಳ್ಳಿ ಮಾದರಿಯಲ್ಲಿ ಎಸ್‌ಟಿಪಿ ಘಟಕವನ್ನು ಸ್ಥಾಪಿಸಿ, ಸಕ್ಕಿಂಗ್‌ ಯಂತ್ರಗಳ ಮೂಲಕ ಕೊಳಚೆ ನೀರನ್ನು ಶುದ್ಧೀಕರಿಸುವ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ
 – ರಾಯಪ್ಪ
ಮುಖ್ಯಾಧಿಕಾರಿ,ಕಾಪು ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next