Advertisement

ಬಿಎಸ್ಸೆನ್ನೆಲ್‌ಗೆ ಕಾಡಲಿದೆ ತೀವ್ರ ಸಿಬಂದಿ ಕೊರತೆ

12:52 AM Jan 06, 2020 | Sriram |

ಮಂಗಳೂರು: ರಾಜ್ಯದಲ್ಲಿ ಬಿಎಸ್ಸೆನ್ನೆಲ್‌ನ ಅರ್ಧಕ್ಕಿಂತಲೂ ಹೆಚ್ಚಿನ ಉದ್ಯೋಗಿಗಳು ಇನ್ನು 3 ವಾರಗಳಲ್ಲಿ ಸ್ವಯಂ ನಿವೃತ್ತಿ ಯೋಜನೆಯಡಿ ಸೇವೆಗೆ ವಿದಾಯ ಹೇಳಲಿದ್ದಾರೆ. ಈ ಸಾಮೂಹಿಕ ನಿರ್ಗಮನದಿಂದ ಎದುರಾಗುವ ಸಿಬಂದಿ ಕೊರತೆ ನೀಗಿಸಲು ಪರ್ಯಾಯ ವ್ಯವಸ್ಥೆ ಇನ್ನೂ ಆಗದಿರುವುದರಿಂದ ಫೆಬ್ರವರಿ ಬಳಿಕ ವಿವಿಧ ಸರಕಾರಿ ಇಲಾಖೆಗಳು, ಬ್ಯಾಂಕಿಂಗ್‌ ಸಹಿತ ಹಲವು ವಲಯಗಳ ಕೋಟ್ಯಂತರ ಗ್ರಾಹಕರಿಗೆ ಸೇವೆ ಒದಗಿಸುವುದು ಸವಾಲಾಗಲಿದೆ.

Advertisement

ಫೆ. 1ರಿಂದ ಬಹುತೇಕ ಎಲ್ಲ ಕಡೆ ಸಿಬಂದಿ ಕೊರತೆ ಗ್ರಾಹಕರನ್ನು ಬಾಧಿಸುವ ಸಾಧ್ಯತೆಯಿದೆ. ಬ್ರಾಡ್‌ಬ್ಯಾಂಡ್‌-ಎಫ್ಟಿಟಿಎಚ್‌ ಸಂಪರ್ಕದಡಿ ಆನ್‌ಲೈನ್‌ ಆಧಾರಿತ ವಿವಿಧ ಸರಕಾರಿ ಸೇವಾ ಕೇಂದ್ರ-ಕಚೇರಿಗಳಿಗೆ ಮತ್ತು ಗ್ರಾಮೀಣ ಭಾಗದ ಸೇವೆಗೆ ಇದರಿಂದ ತೀವ್ರ ಬಿಸಿ ತಟ್ಟುವ ಸಾಧ್ಯತೆಯಿದೆ.

ವೆಚ್ಚ ಕಡಿತ ಉದ್ದೇಶದಿಂದ ಬಿಎಸ್ಸೆನ್ನೆಲ್‌
ವಿಆರ್‌ಎಸ್‌ ಘೋಷಿಸಿತ್ತು. 50 ವರ್ಷ ಮೇಲ್ಪಟ್ಟ 1,04,471 ಮಂದಿ ವಿಆರ್‌ಎಸ್‌ ಪಡೆಯಲು ನಿರ್ಧರಿಸಿದ್ದಾರೆ. 50 ವರ್ಷ ಮೇಲ್ಪಟ್ಟ 25,902 ಮಂದಿ, 50ಕ್ಕಿಂತ ಕೆಳಗಿನ 49,315 ಉದ್ಯೋಗಿಗಳ ಸಹಿತ ಒಟ್ಟು 75,217 ಮಂದಿ ಮುಂದುವರಿಯಲಿದ್ದಾರೆ.

ಪರ್ಯಾಯ ವ್ಯವಸ್ಥೆ ಕಷ್ಟ
ಪರ್ಯಾಯ ವ್ಯವಸ್ಥೆಯಾಗಿ ಅಗತ್ಯವಿರುವ ಕಡೆ ಹೊರಗುತ್ತಿಗೆ ಮೂಲಕ ಸಿಬಂದಿ ನೇಮಕಕ್ಕೆ ಚಾಲನೆ ನೀಡಬೇಕಿತ್ತು; ಅದಾಗಿಲ್ಲ. ಈಗಾಗಲೇ ಹೊರಗುತ್ತಿಗೆ ಪಡೆದ ಗುತ್ತಿಗೆದಾರರಿಗೆ ಭಾರೀ ಮೊತ್ತ ಪಾವತಿ ಬಾಕಿಯಿದೆ. ಮಂಗಳೂರು ಸಹಿತ ಹಲವು ಕಡೆ ಖಾಸಗಿ ಕಟ್ಟಡಗಳಲ್ಲಿ ಇರುವ ಕಚೇರಿಗಳ ಬಾಡಿಗೆ, ವಿದ್ಯುತ್‌ ಬಿಲ್‌ ಪಾವತಿಯೂ ಬಾಕಿಯಿದೆ. ಹೀಗಾಗಿ ಮತ್ತೆ ಹೊರಗುತ್ತಿಗೆಗೆ ಟೆಂಡರ್‌ ಕರೆದರೆ ಗುತ್ತಿಗೆದಾರರು ಆಸಕ್ತಿ ತೋರಿಸುವ ಸಾಧ್ಯತೆ ಕಡಿಮೆ.

ಮಂಗಳೂರು ವ್ಯಾಪ್ತಿಯಲ್ಲಿ ಒಟ್ಟು 881 ಮಂದಿಯಿದ್ದು, 582 ಮಂದಿ ವಿಆರ್‌ಎಸ್‌ ಆಯ್ಕೆ ಮಾಡಿದ್ದಾರೆ. ಎಜಿಎಂ ಮತ್ತು ಡಿಜಿಎಂ ಸ್ತರದಲ್ಲಿ ಒಟ್ಟು 31 ಮಂದಿಯಿದ್ದು, 23 ಅಧಿಕಾರಿಗಳು ಸೇರಿದ್ದಾರೆ. ಎಸ್‌ಡಿಇ-ಜೆಟಿಒ ವಿಭಾಗದಲ್ಲಿ 83 ಮಂದಿ, ಗ್ರೂಪ್‌-ಸಿಯಲ್ಲಿ 462 ಮತ್ತು ಡಿ-ಗ್ರೂಪ್‌ನ 13 ಮಂದಿ ಆಯ್ಕೆ ಮಾಡಿದ್ದಾರೆ. ಹೀಗಾಗಿ ನಮ್ಮಲ್ಲಿ 299 ಮಂದಿಯಷ್ಟೇ ಉಳಿಯುತ್ತಾರೆ. ಬದಲಿ ವ್ಯವಸ್ಥೆ ಆಗುತ್ತಿದೆ. ಆದರೆ ಟೆಂಡರ್‌ ಪ್ರಕ್ರಿಯೆಯಾದ ಬಳಿಕವಷ್ಟೇ ಹೊರಗುತ್ತಿಗೆಯಡಿ ನೇಮಕಾತಿ ಮಾಡಬೇಕಿದೆ.
– ಪ್ರಕಾಶ್‌ ಎಂ.ಎಚ್‌., ಡಿಜಿಎಂ (ಆಡಳಿತ ಮತ್ತು ನಿರ್ವಹಣೆ), ಮಂಗಳೂರು

Advertisement

ಸುರೇಶ್‌ ಪುದುವೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next