ನವದೆಹಲಿ: ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಕಳೆದ ಎರಡು ದಿನಗಳಿಂದ ಉಷ್ಣ ಗಾಳಿ ತೀವ್ರ ಏರಿಕೆಯಾಗಿದೆ. ಶನಿವಾರ(ಮೇ 14) 44 ಡಿಗ್ರಿ ಸೆಲ್ಸಿಯಷ್ಟಿದ್ದು, ಭಾನುವಾರ 46-47 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾಗಲಿದೆ ಎಂದು ಮುನ್ಸೂಚನೆ ನೀಡಿರುವ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಇದನ್ನೂ ಓದಿ:ಕುಮಟಾದಲ್ಲಿ ಗೋಕಳ್ಳರ ಅಟ್ಟಹಾಸ : ರಸ್ತೆ ಬದಿ ಮಲಗಿದ್ದ ಹಸುವನ್ನೇ ಹೊತ್ತೊಯ್ದರು..
ಶುಕ್ರವಾರ ದೆಹಲಿಯಲ್ಲಿ 42.5 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದ್ದು, ಶನಿವಾರ ಗರಿಷ್ಠ ತಾಪಮಾನ 44 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾಗಲಿದೆ ಎಂದು ದೆಹಲಿಯ ಸಫ್ದಾರ್ ಜಂಗ್ ಹವಾಮಾನ ಕೇಂದ್ರ ಮುನ್ಸೂಚನೆ ನೀಡಿತ್ತು.
ದೆಹಲಿಯ ನಜಾಫ್ ಗಢದಲ್ಲಿ ಶುಕ್ರವಾರ ಗರಿಷ್ಠ ತಾಪಮಾನ 46.1 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾಗಿತ್ತು. ಸಾಮಾನ್ಯ ತಾಪಮಾನಕ್ಕಿಂತ ಈ ವರ್ಷ ಜಾಫರ್ ಪುರ್ ನಲ್ಲಿ 45.6 ಡಿಗ್ರಿ ಸೆಲ್ಸಿಯಸ್ ಹಾಗೂ ಮುಂಗೇಶ್ ಪುರ್ ನಲ್ಲಿ 45.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.
ಭಾನುವಾರ ತಾಪಮಾನ ಇನ್ನಷ್ಟು ಏರಿಕೆಯಾಗಲಿರುವ ನಿಟ್ಟಿನಲ್ಲಿ ದೆಹಲಿಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ ನಾಲ್ಕು ಬಣ್ಣದ ಕೋಡ್ ಗಳನ್ನು ಹವಾಮಾನ ಎಚ್ಚರಿಕೆಗೆ ಬಳಕೆ ಮಾಡುತ್ತಿದೆ. ಗ್ರೀನ್ ಅಲರ್ಟ್ (ಯಾವುದೇ ಕ್ರಮದ ಅಗತ್ಯವಿಲ್ಲ), ಯೆಲ್ಲೋ ಅಲರ್ಟ್ (ಹೆಚ್ಚಿನ ಅಪ್ ಡೇಟ್ ನಿರೀಕ್ಷಿಸಿ), ಆರೆಂಜ್ ಅಲರ್ಟ್ (ಮುಂಜಾಗ್ರತಾ ಕ್ರಮಕ್ಕೆ ಸಿದ್ಧತೆ) ಹಾಗೂ ರೆಡ್ ಅಲರ್ಟ್ ( ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು) ಘೋಷಿಸುವ ಪರಿಪಾಠ ಇಟ್ಟುಕೊಂಡಿದೆ.