Advertisement

Udupi ಅಂತರ್ಜಲ ಮಟ್ಟ ತೀವ್ರ ಕುಸಿತ; ಎಚ್ಚರ ತಪ್ಪಿದರೆ ಆಪತ್ತು ಖಚಿತ

01:06 AM Feb 26, 2024 | Team Udayavani |

ಉಡುಪಿ: ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ವಾಡಿಕೆ ಮಳೆ ಪ್ರಮಾಣ ಕುಸಿಯುತ್ತಿರುವುದರ ಪರಿಣಾಮವಾಗಿ ಅಂತರ್ಜಲ ಮಟ್ಟವೂ ಗಣನೀಯವಾಗಿ ಕುಸಿಯುತ್ತಿದೆ. ಜಿಲ್ಲೆಯಲ್ಲಿ ಜನವರಿ ಒಂದೇ ತಿಂಗಳ ಅವಧಿಯಲ್ಲಿ ಅಂತರ್ಜಲ 0.26 ಮೀಟರ್‌ಗಳಷ್ಟು ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ.

Advertisement

ನಗರ ಪ್ರದೇಶ ಮತ್ತು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಕೆಲವರು ಟ್ಯಾಂಕರ್‌ ನೀರಿನ ಮೊರೆ ಹೋಗು ತ್ತಿದ್ದಾರೆ. ನದಿ ನೀರಿನ ಮಟ್ಟವೂ ಕಡಿಮೆಯಾಗುತ್ತಿದೆ. ಮಳೆ ನೀರಿನ ಸದುಪಯೋಗ ಹಾಗೂ ನೀರಿನ ಮೂಲಗಳ ಸಂರಕ್ಷಣೆ ಮಾಡದಿದ್ದಲ್ಲಿ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ ಜಲಪರಿಣತರು.

ತಿಂಗಳುವಾರು ಮಾಹಿತಿ: 2023ರ ಜನವರಿಯಲ್ಲಿ ಅಂತರ್ಜಲ ಮಟ್ಟ 7.79 ಮೀಟರ್‌ ಇತ್ತು.

ಫೆಬ್ರವರಿಯಲ್ಲಿ 8.35 ಮೀ.ಗೆ ಇಳಿದಿತ್ತು. ಮಾರ್ಚ್‌ನಲ್ಲಿ 9.07 ಮೀ., ಎಪ್ರಿಲ್‌ನಲ್ಲಿ 9.64 ಮೀ., ಮೇ ತಿಂಗಳಿನಲ್ಲಿ 10.2 ಮೀ.ಗೆ ಮುಟ್ಟಿತ್ತು.

ಜೂನ್‌ನಲ್ಲಿ ಬರಬೇಕಾದ ಮಳೆ ತಡವಾಯಿತು. ಜುಲೈ ತಿಂಗಳಿನಲ್ಲಿ ಮಳೆ ಬಂದದ್ದರಿಂದ 3.25 ಮೀ.ಗೆ ಏರಿಕೆಯಾಗಿತ್ತು. ಆಗಸ್ಟ್‌ನಲ್ಲಿ 4.83 ಮೀ.ಗೆ ಇಳಿದಿತ್ತು. ಸೆಪ್ಟಂಬರ್‌ನಲ್ಲಿ 4.93 ಮೀ.ಗೆ ಕುಸಿದಿತ್ತು. ಅಕ್ಟೋಬರ್‌ನಲ್ಲಿ 5.96 ಮೀ.ಗೆ ಇಳಿದು, ನವೆಂಬರ್‌ನಲ್ಲಿ 6.94 ಮೀ.ಗೆ ಕುಸಿದಿತ್ತು. ಡಿಸೆಂಬರ್‌ನಲ್ಲಿ 7.77 ಮೀಟರ್‌ ಕೆಳಗೆ ಹೋಗಿದೆ.
2024ರ ಜನವರಿಯಲ್ಲಿ 8.03 ಮೀಟರ್‌ಗೆ ಇಳಿದಿದ್ದು, ಕಳೆದ ವರ್ಷಕ್ಕಿಂತ ಕಡಿಮೆ ಪ್ರಮಾಣದಲ್ಲಿದೆ. ಜತೆಗೆ ಮಳೆಯೂ ಒಟ್ಟು ಶೇ. 25ರಷ್ಟು ಕಡಿಮೆಯಾಗಿತ್ತು.

Advertisement

2024ರ ಜನವರಿ ಅಂತ್ಯಕ್ಕೆ ಜಿಲ್ಲೆಯ ಅಂತರ್ಜಲ ಮಟ್ಟ 8.03 ಮೀ. ನಷ್ಟಿದ್ದರೆ, ಕಳೆದ ವರ್ಷ ಇದೇ ವೇಳೆಗೆ 7.79 ಮೀ. ಇತ್ತು. ಅಂದರೆ 0.23 ಮೀ.ನಷ್ಟು ಇಳಿದಿದೆ. ಮಳೆ ಬಾರದೆ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಅಂತರ್ಜಲ ಇನ್ನಷ್ಟು ಕುಸಿಯುವ ಸಾಧ್ಯತೆಯಿದೆ. ಹಿಂದಿನ ಮಳೆಗಾಲ ದಲ್ಲೂ ಮಳೆ ಕೊರತೆ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ನಿರೀಕ್ಷಿತ ಮಟ್ಟದಲ್ಲಿ ಏರಿಕೆಯಾಗಿಲ್ಲ ಎನ್ನುವುದು ಆತಂಕಕ್ಕೆ ಮತ್ತೊಂದು ಕಾರಣ.

ಎಚ್ಚರಿಕೆ ಅಗತ್ಯ: ಉಡುಪಿ ಮತ್ತು ಬೈಂದೂರಿನ ಕೆಲವು ಪ್ರದೇಶಗಳಲ್ಲಿ ಅಂತರ್ಜಲದ ಮಟ್ಟ ಅಪಾಯದ ಹಂತ ತಲುಪಿದೆ. ಕಾರ್ಕಳ ಹಾಗೂ ಕುಂದಾಪುರದಲ್ಲೂ ಪರಿಸ್ಥಿತಿ ಭಿನ್ನ ವಾಗಿಲ್ಲ. ಕಾಪು, ಬ್ರಹ್ಮಾವರ ಮತ್ತು ಹೆಬ್ರಿ ಭಾಗದಲ್ಲಿ ಇಂದಿನಿಂದಲೇ ವಿಶೇಷ ಎಚ್ಚರಿಕೆ ವಹಿಸುವುದು ಉತ್ತಮ ಎನ್ನುವ ಪರಿಸ್ಥಿತಿ ಇದೆ.

ಅಂತರ್ಜಲ ಮಟ್ಟದ ವೃದ್ಧಿಗಾಗಿ ಜಲಮೂಲಗಳ ರಕ್ಷಣೆ, ಕಿಂಡಿ ಅಣೆ ಕಟ್ಟುಗಳಿಗೆ ನಿರ್ದಿಷ್ಟ ಸಮಯದಲ್ಲಿ ಹಲಗೆ ಹಾಕುವುದು, ಪ್ರತೀ ಮನೆ ಯಲ್ಲೂ ಮಳೆನೀರು ಕೊಯ್ಲು ಅಳ ವಡಿಸುವುದು, ನಿರುಪಯುಕ್ತ ತೆರೆದ ಬಾವಿ, ಬೋರ್‌ವೆಲ್‌ಗ‌ಳಿಗೆ ಜಲ ಮರುಪೂರಣ ಮಾಡುವ ಪ್ರಕ್ರಿಯೆ ನಡೆಸ ಬೇಕು ಎನ್ನುತ್ತಾರೆ ಅಂತರ್ಜಲ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು.

ಇಲಾಖೆಯಿಂದ ನಿರ್ದೇಶನ
ಹೆಚ್ಚಿನ ಪ್ರಮಾಣದ ನೀರು ಬಳಕೆ ಯಾಗುವ ಶಾಲೆ, ಆಸ್ಪತ್ರೆ, ಸಭಾಭವನ, ಹೊಟೇಲ್‌ಗ‌ಳಿಗೆ ನೀರನ್ನು ಮಿತವಾಗಿ ಬಳಸುವಂತೆ ಜಿಲ್ಲಾ ಅಂತರ್ಜಲ ನಿರ್ದೇಶನಾಲಯದಿಂದ ಸುತ್ತೋಲೆ ನೀಡಲಾಗಿದೆ. ಎಲ್ಲಿಯೂ ನೀರು ಮಲಿನ, ಪೋಲಾಗದಂತೆ ಎಚ್ಚರ ವಹಿಸಬೇಕು. ಕೈ, ತಟ್ಟೆ ತೊಳೆದ ನೀರನ್ನು ತೋಟಕ್ಕೆ ಬಳಸುವ ಮೂಲಕ ಸದ್ಬಳಕೆ ಮಾಡಬೇಕು ಎಂದು ಸೂಚಿಸಿದೆ.

ಮಳೆ ಕೊರತೆ ಇರುವುದರಿಂದ ಅಂತರ್ಜಲ ಮಟ್ಟ ಕುಸಿದಿದೆ. ನೀರಿನ ಮೂಲಗಳ ಸಂರಕ್ಷಣೆಯ ಜತೆಗೆ ಮಳೆ ನೀರಿನ ಸದ್ಬಳಕೆಯೂ ಆಗಬೇಕು ಹಾಗೂ ಅಗತ್ಯವಾಗಿ ನೀರಿನ ಮಿತ ಬಳಕೆ ಮಾಡಬೇಕು.
  ಡಾ. ಎಂ. ದಿನಕರ ಶೆಟ್ಟಿ
ಹಿರಿಯ ಭೂ ವಿಜ್ಞಾನಿ, ಅಂತರ್ಜಲ ಮತ್ತು ಭೂ ವಿಜ್ಞಾನ ಇಲಾಖೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next