ಮಂಗಳೂರು/ಬೆಳ್ತಂಗಡಿ: ಕರಾವಳಿ ಜಿಲ್ಲೆಗಳಲ್ಲಿ ಚಳಿ ಆರಂಭವಾಗಿದ್ದು, ಕನಿಷ್ಠ ಉಷ್ಣಾಂಶ ಇಳಿಕೆಯಾಗಿದೆ.
ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಮಂಗಳವಾರ ಬೆಳಗ್ಗೆ ಚಳಿಯ ವಾತಾವರಣ ಇತ್ತು. ಚಳಿ ವಾತಾವರಣದಿಂದ ಅಕಾಲಿಕ ಮಳೆಯಿಂದ ತತ್ತರಿಸಿದ್ದ ಕೃಷಿಕರು ಕೊಂಚ ನಿರಾಳರಾಗಿದ್ದಾರೆ.
ಇದೀಗ ಬಿಸಿಲಿನ ವಾತಾವರಣ ಹೆಚ್ಚಿದ್ದರಿಂದ ಅಡಿಕೆ ಬೆಳೆಗಾರರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಸಂಜೆಯಿಂದಲೇ ಇಬ್ಬನಿ ಬೀಳಲು ಆರಂಭವಾಗಿದ್ದು, ಮುಂಜಾನೆ ಮಂಜು ಕವಿದ ವಾತಾವರಣದ ನಡುವೆ ಎಲ್ಲೆಡೆ ಚಳಿ ಆವರಿಸಿದೆ.
ಚಾರ್ಮಾಡಿ ಸಹಿತ ಶಿರಾಡಿ ಘಾಟಿ ಪ್ರದೇಶಗಳಲ್ಲಿ ರಾತ್ರಿ ಸಂಚಾರ ದುರ್ಗಮವಾ ಗಿದ್ದು, ರಸ್ತೆ ಸಹಿತ ಎದುರಿನಿಂದ ಬರುವ ವಾಹನ ಕಾಣದಷ್ಟು ದಟ್ಟ ಮಂಜು ಆವರಿಸುತ್ತಿದೆ. ಕನಿಷ್ಠ 18ರಿಂದ 20 ಡಿಗ್ರಿ ವರೆಗೆ ವಾತಾವರಣ ತಂಪೇರುತ್ತಿದ್ದು, ಅದೇ ಮಧ್ಯಾಹ್ನ ಉತ್ತಮ ಬಿಸಿಲಿನ ವಾತಾವರಣವೂ ಕಂಡುಬರುತ್ತಿದೆ.
ಇದನ್ನೂ ಓದಿ:40 ನಗರಗಳಲ್ಲಿ ಬರಲಿದೆ ವಿಶೇಷ ಹೈಬ್ರಿಡ್ ಶಾಲೆ; ದಕ್ಷಿಣ ಏಷ್ಯಾದಲ್ಲಿಯೇ ಇಂಥ ಪ್ರಯತ್ನ ಮೊದಲು
ಮಂಗಳೂರು, ಉಡುಪಿಯಲ್ಲೂ ತೀವ್ರ ಚಳಿ
ಮಂಗಳೂರು ಮತ್ತು ಉಡುಪಿಯಲ್ಲೂ ಚಳಿ ತೀವ್ರಗೊಂಡಿದೆ. ಈ ಬಾರಿ ಮೊದಲ ಬಾರಿಗೆ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಇನ್ನೂ ಎರಡು-ಮೂರು ದಿನ ಇದೇ ರೀತಿ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.