ನೋನಿ : ಮಣಿಪುರದಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತ ವೊಂದರಲ್ಲಿ ಕನಿಷ್ಠ 7 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಲಾಂಗ್ಸಾಯ್ ಟುಬುಂಗ್ ಗ್ರಾಮದ ಬಳಿ ಬಿಷ್ಣುಪುರ್ – ಖೌಪುಮ್ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಯರಿಪೋಕ್‌ನ ತಂಬಲ್ನು ಹೈಯರ್ ಸೆಕೆಂಡರಿ ಶಾಲೆಯಿಂದ ವಿದ್ಯಾರ್ಥಿಗಳನ್ನು ಹೊತ್ತ ಎರಡು ಬಸ್‌ಗಳು ಅಧ್ಯಯನ ಪ್ರವಾಸಕ್ಕಾಗಿ ಖೌಪುಮ್ ಕಡೆಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಏಳು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಮತ್ತು 40 ಮಂದಿ ಗಾಯಗೊಂಡಿದ್ದಾರೆ.ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡ ವಿದ್ಯಾರ್ಥಿಗಳನ್ನು ಇಂಫಾಲ್‌ನ ಮೆಡಿಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಣಿಪುರ ಸಿಎಂ ಎನ್ ಬಿರೇನ್ ಸಿಂಗ್ ಇಂಫಾಲ್‌ನ ಆಸ್ಪತ್ರೆಗೆ ಭೇಟಿ ನೀಡಿ ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿಗಳ ಕ್ಷೇಮ ವಿಚಾರಿಸಿದರು.
ಎಲ್ಲಾ ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ನಾವು ನಮ್ಮ ಸಂತಾಪವನ್ನು ತಿಳಿಸುತ್ತೇವೆ. ಮುಂಜಾನೆ ಮತ್ತು ಸಂಜೆಯ ಸಮಯದಲ್ಲಿ ಯಾವುದೇ ಪ್ರವಾಸವನ್ನು ಮಾಡದಂತೆ ನಾವು ಶಾಲೆಗಳು ಮತ್ತು ಕಾಲೇಜುಗಳಿಗೆ ವಿನಂತಿಸುತ್ತೇವೆ. ಸಂತ್ರಸ್ತರ ಸಂಬಂಧಿಕರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ಎನ್ ಬಿರೇನ್ ಸಿಂಗ್ ತಿಳಿಸಿದ್ದಾರೆ.