ಜೈಪುರ : ವಿಧಾನಸಭಾ ಚುನಾವಣೆ ವೇಳೆ ಪಕ್ಷಾಂತರ ಪರ್ವ ತೀವ್ರವಾಗಿದ್ದು, ರಾಜಸ್ಥಾನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕರು ಸೇರಿ ಪ್ರಮುಖ ನಾಯಕರು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಮಾಜಿ ಶಾಸಕರಾದ ಚಂದ್ರಶೇಖರ್ ವೈದ್, ನಂದಲಾಲ್ ಪೂನಿಯಾ, ಜೈಪುರ ಮಾಜಿ ಮೇಯರ್ ಜ್ಯೋತಿ ಖಂಡೇಲ್ವಾಲ್ ಸೇರಿದಂತೆ ಹಲವು ನಾಯಕರು ಶನಿವಾರ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.
ಬಿಜೆಪಿಗೆ ಸೇರ್ಪಡೆಗೊಂಡ ಇತರ ನಾಯಕರಲ್ಲಿ ಮಾಂಡವಾದಿಂದ ಸ್ವತಂತ್ರ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹರಿ ಸಿಂಗ್ ಚರಣ್, ಕಾಂಗ್ರೆಸ್ ನಾಯಕ ಸನ್ವರ್ಮಲ್ ಮೆಹಾರಿಯಾ ಮತ್ತು ಮಾಜಿ ಐಪಿಎಸ್ ಅಧಿಕಾರಿಗಳಾದ ಕೇಸರ್ ಸಿಂಗ್ ಶೇಖಾವತ್ ಮತ್ತು ಭೀಮ್ ಸಿಂಗ್ ಸೇರಿದ್ದಾರೆ.
ಜೈಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಸಿಪಿ ಜೋಶಿ ”ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ನಂಬಿಕೆ ಹೆಚ್ಚಾಗಿದೆ. ಇಂದು ಜನರು ಮೋದಿಯವರ ಭರವಸೆಯ ಮೇಲೆ ನಂಬಿಕೆ ಇಟ್ಟಿದ್ದಾರೆ. ಕಾಂಗ್ರೆಸ್ ನೀಡಿದ ಭರವಸೆಗಳನ್ನು ಜನರು ನಂಬುವುದನ್ನು ನಿಲ್ಲಿಸಿದ್ದಾರೆ. ಸಂಪೂರ್ಣ ಕೃಷಿ ಸಾಲ ಮನ್ನಾ, ನಿರುದ್ಯೋಗ ಭತ್ಯೆ, ಮಹಿಳಾ ಭದ್ರತೆ, ಅಭಿವೃದ್ಧಿ ಮತ್ತು ಹಣದುಬ್ಬರವನ್ನು ನಿಯಂತ್ರಿಸುವುದು ಸೇರಿದಂತೆ ಖಾತರಿಗಳು ಏನಾಯಿತು ಎಂಬುದನ್ನು ಅವರು ನೋಡಿದ್ದಾರೆ” ಎಂದರು.
ಇಡಿ ಅಧಿಕಾರಿಗಳ ಕುರಿತು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿಕೆಯನ್ನು ಖಂಡಿಸಿದ ಜೋಶಿ,ಇಂತಹ ಅವಹೇಳನಕಾರಿ ಪದಗಳನ್ನು ಬಳಸುವುದು ಖಂಡನೀಯ ಎಂದು ಹೇಳಿದರು. “ನಾಯಿಗಳಿಗಿಂತಲೂ ಹೆಚ್ಚು ಇಡಿ ದೇಶದಲ್ಲಿ ಓಡಾಡುತ್ತಿದೆ ಎಂದು ಮುಖ್ಯಮಂತ್ರಿ (ಭೂಪೇಶ್ ಬಘೇಲ್) ಹೇಳಬೇಕಿತ್ತು ಎಂದಿದ್ದಾರೆ. ಇದಕ್ಕಿಂತ ದೊಡ್ಡ ದೌರ್ಭಾಗ್ಯ ಇನ್ನೇನಿದೆ?” ಎಂದು ಕಿಡಿ ಕಾರಿದರು.
ಬಿಜೆಪಿ ರಾಜಸ್ಥಾನ ಚುನಾವಣ ಉಸ್ತುವಾರಿ ಅರುಣ್ ಸಿಂಗ್ ಮಾತನಾಡಿ ”ಗೆಹ್ಲೋಟ್ ಸರ್ಕಾರದ ಕೌಂಟ್‌ಡೌನ್ ಪ್ರಾರಂಭವಾಗಿದೆ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಅಂತರದಿಂದ ಗೆಲ್ಲುವುದು ಸ್ಪಷ್ಟವಾಗಿದೆ” ಎಂದರು.