ರಾಯ್ಪುರ: ಆಂದ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ವಿಷಾನಿಲ ಸೋರಿಕೆಯಿಂದಾಗಿ ಒಂಭತ್ತು ಜನ ಸಾವಿಗೀಡಾಗಿ ಹಲವರು ತೀವ್ರ ಅಸ್ವಸ್ಥಗೊಂಡ ಘಟನೆಯ ಬೆನ್ನಲ್ಲೇ ಇತ್ತ ಛತ್ತೀಸ್ ಗಢದ ಪೇಪರ್ ಮಿಲ್ ಒಂದರಲ್ಲಿ ವಿಷಾನಿಲ ಸೇವಿಸಿ ಏಳು ಜನ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ.
ಇಲ್ಲಿನ ರಾಯ್ ಘರ ಜಿಲ್ಲೆಯಲ್ಲಿ ಈ ಘಟನೆ ನಡೆದಿರುವುದಾಗಿ ಸ್ಥಳೀಯ ಪೊಲೀಸ್ ಮೂಲಗಳು ನೀಡಿರುವ ಮಾಹಿತಿಯಿಂದ ತಿಳಿದುಬಂದಿದೆ.
ಇಲ್ಲಿನ ಟೆಲ್ಟಾ ಗ್ರಾಮದಲ್ಲಿರುವ ಶಕ್ತಿ ಪೇಪರ್ ಮಿಲ್ ನಲ್ಲಿ ಕಾರ್ಮಿಕರು ತೆರೆದ ಟ್ಯಾಂಕ್ ಒಂದನ್ನು ಸ್ವಚ್ಛಗೊಳಿಸುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಇಷ್ಟೆಲ್ಲಾ ನಡೆದರೂ ಕಾರ್ಖಾನೆಯ ಮಾಲಕರು ಸ್ಥಳೀಯಾಡಳಿತಕ್ಕೆ ಯಾವುದೇ ಮಾಹಿತಿಯನ್ನು ನೀಡಲಿಲ್ಲ ಎಂದು ತಿಳಿದುಬಂದಿದೆ. ಆಸ್ಪತ್ರೆಯ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ ಬಳಿಕವೇ ಈ ದುರ್ಘಟನೆ ಬೆಳಕಿಗೆ ಬಂದಿದೆ.
ಕೋವಿಡ್ 19 ಸಂಬಂಧಿತ ಲಾಕ್ ಡೌನ್ ನಿಂದಾಗಿ ಈ ಕಾರ್ಖಾನೆ ಕಳೆದ ಕೆಲವು ಸಮಯಗಳಿಂದ ಮುಚ್ಚಲ್ಪಟ್ಟಿತ್ತು. ಲಾಕ್ ಡೌನ್ ನಿಯಮ ಸಡಿಲಿಕೆಯ ಕಾರಣದಿಂದ ಕೆಲಸವನ್ನು ಪುನರ್ ಪ್ರಾರಂಭಿಸುವ ಉದ್ದೇಶದಿಂದ ಇಲ್ಲಿ ಸ್ವಚ್ಛತಾ ಕಾರ್ಯಗಳು ನಡೆಯುತ್ತಿದ್ದವು ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.
ಅಸ್ವಸ್ಥಗೊಂಡ ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಇವರಲ್ಲಿ ಗಂಭೀರ ಸ್ಥಿತಿಯಲ್ಲಿರುವ ಮೂವರನ್ನು ರಾಯ್ಪುರಕ್ಕೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.