Advertisement

ಖಿನ್ನತೆಯ ಏಳು ಲಕ್ಷಣಗಳು

12:16 PM Apr 17, 2022 | Team Udayavani |

ಖಿನ್ನತೆಯು ಒಂದು ಮಾನಸಿಕ ಅನಾರೋಗ್ಯ ಸ್ಥಿತಿಯಾಗಿದ್ದು, ವ್ಯಕ್ತಿಯ ಮನೋಭಾವದ ಜತೆಗೆ ನೇರ ಸಂಬಂಧ ಹೊಂದಿದೆ. ದುಃಖ, ಜಡತ್ವ, ಅಸಂತೋಷ ಇದರ ಜತೆಗೆ ನೇರವಾಗಿ ಬೆರೆತಿರುವ ಮನೋಭಾವಗಳು. ಆದರೆ ಖಿನ್ನತೆಯ ವೈದ್ಯಕೀಯ ವಿಶ್ಲೇಷಣೆಯ ದೃಷ್ಟಿಯಿಂದ ಹೇಳುವುದಾದರೆ, ಈ ಭಾವನಾತ್ಮಕ ಬದಲಾವಣೆಗಳನ್ನಷ್ಟೇ ಲೆಕ್ಕಕ್ಕೆ ತೆಗೆದುಕೊಂಡು ರೋಗನಿರ್ಣಯಕ್ಕೆ ಬರುವುದು ಸಾಧ್ಯವಿಲ್ಲ. ದುಃಖವು ಖಿನ್ನತೆಗೆ ಒಂದು ಕಾರಣ; ಆದರೆ ಅದನ್ನು ಪ್ರಚೋದಕ ಅಥವಾ ಅಪ್ರಚೋದಕ ಎಂದು ಹೇಳಲು ಸಾಧ್ಯವಿಲ್ಲ. ಇದೇ ಕಾರಣದಿಂದಾಗಿ ಒಬ್ಬ ವ್ಯಕ್ತಿಗೆ ಈ ಕಾಯಿಲೆಯನ್ನು ಇತರರಿಂದ ಬಚ್ಚಿಟ್ಟುಕೊಳ್ಳುವುದು ಸಾಧ್ಯವಾಗುತ್ತದೆ. ಆದ್ದರಿಂದಲೇ ಖನ್ನತೆಗೆ ಸಂಬಂಧಿಸಿದ ಅನೇಕ ಲಕ್ಷಣಗಳಿದ್ದು, ಅವುಗಳನ್ನು ಕೂಡ ಖಿನ್ನತೆಯ ವೈದ್ಯಕೀಯ ರೋಗ ನಿರ್ಣಯ ನಡೆಸುವಾಗ ಪರಿಗಣಿಸುವುದು ಅಗತ್ಯವಾಗುತ್ತದೆ.

Advertisement

ಈ ಕೆಳಗಿನ ಏಳು ಚಿಹ್ನೆಗಳನ್ನು ಆಧರಿಸಿ ವ್ಯಕ್ತಿಯೊಬ್ಬ ಖನ್ನತೆಯನ್ನು ಅನುಭವಿಸುತ್ತಿದ್ದಾನೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು

ಅನ್ಹೆಡೋನಿಯಾ

ವ್ಯಕ್ತಿಯೊಬ್ಬನಿಗೆ ರೂಢಿಗತ ಕಾರ್ಯಚಟುವಟಿಕೆಗಳಲ್ಲಿ ಆಸಕ್ತಿ ಕುಸಿತವಾಗಿದ್ದರೆ ಅದನ್ನು ‘ಅನ್ಹೆಡೋನಿಯಾ’ ಎಂದು ಕರೆಯಲಾಗುತ್ತದೆ. ಇದನ್ನು ಖಿನ್ನತೆಯ ಪ್ರಾಮುಖ್ಯ ಚಿಹ್ನೆಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ವ್ಯಕ್ತಿಯು ದೈನಿಕ ರೂಢಿಯ ಕೆಲಸಕಾರ್ಯಗಳನ್ನು ಮಾಡುವುದರ ಬಗ್ಗೆ ಆಸಕ್ತಿಯನ್ನು ಕಳೆದುಕೊಳ್ಳುತ್ತಾನೆ. ಸರ್ವೇಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ಮಾಡಿ ಸಂತೋಷವನ್ನು ಅನುಭವಿಸುವ ಚಟುವಟಿಕೆಗಳಾದ ಗೆಳೆಯರ ಜತೆಗೆ ಮಾತುಕತೆ, ಕುಟುಂಬದ ಜತೆಗೆ ಸಮಯ ಕಳೆಯುವುದು, ಸಿನೆಮಾ ಅಥವಾ ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸುವುದು, ಆಸಕ್ತಿಯ ಹವ್ಯಾಸಗಳಲ್ಲಿ ತೊಡಗಿಕೊಳ್ಳುವುದು, ಲೈಂಗಿಕ ಚಟುವಟಿಕೆಗಳು ಇತ್ಯಾದಿಗಳಲ್ಲಿ ಆತ ಆಸಕ್ತಿಯನ್ನು ಕಳೆದುಕೊಳ್ಳುತ್ತಾನೆ.

ಶಕ್ತಿ, ಚೈತನ್ಯ ಮಟ್ಟ ಕುಸಿತ

Advertisement

ಅಂದರೆ ಬೇಗನೆ ದಣಿವನ್ನು ಅನುಭವಿಸುತ್ತಾನೆ; ಇದು ಮಾನಸಿಕ ಮತ್ತು ದೈಹಿಕ – ಎರಡೂ ರೀತಿಯ ದಣಿವು ಆಗಿರಬಹುದು. ಕೆಲಸಕಾರ್ಯಗಳನ್ನು ಆರಂಭಿಸಲು ನಿರುತ್ಸಾಹ, ಸ್ವಪ್ರೇರಣೆ ಮತ್ತು ಆತ್ಮವಿಶ್ವಾಸ, ಲವಲವಿಕೆಯ ಕೊರತೆ ಕಂಡುಬರುತ್ತದೆ. ಆಲಸ್ಯ ಹಿಡಿದಂತೆ, ಜಡ್ಡುಗಟ್ಟಿದಂತೆ ಕಂಡುಬರುವುದು, ಇತರ ಜತೆಗೆ ಸಂಭಾಷಣೆಯ ಸಂದರ್ಭದಲ್ಲಿ ತಮ್ಮ ಆಲೋಚನೆ ಅಥವಾ ಅಭಿಪ್ರಾಯಗಳನ್ನು ನೀಡಲು ವಿಫ‌ಲವಾಗುವುದು ಕಂಡುಬರುತ್ತದೆ.

ಸತತವಾಗಿ ಋಣಾತ್ಮಕ ಆಲೋಚನೆಗಳು

ವರ್ತಮಾನ, ಭೂತಕಾಲ ಮತ್ತು ಭವಿಷ್ಯಗಳ ಬಗ್ಗೆ ಸತತವಾದ, ನಿಬಿಡವಾದ ಋಣಾತ್ಮಕ ಆಲೋಚನೆಗಳೇ ಮನಸ್ಸಿನಲ್ಲಿ ತುಂಬಿರುತ್ತವೆ. ಋಣಾತ್ಮಕ ಆಲೋಚನೆಗಳು ಸರಣಿಯಾಗಿ ಮೂಡುತ್ತಿರುತ್ತವೆ, ಯಾವುದೇ ವಿಚಾರದ ಬಗ್ಗೆ ಅತಿಯಾದ ಆಲೋಚನೆ ಕಂಡುಬರುತ್ತದೆ.

ನಿದ್ದೆಯ ಕ್ರಮದಲ್ಲಿ ವ್ಯತ್ಯಾಸ, ತೊಂದರೆ

ನಿದ್ದೆಯ ಕೊರತೆ ಕಂಡುಬರಬಹುದು (ಇನ್ಸೋಮ್ನಿಯಾ- ನಿದ್ರಾಹೀನತೆ) ಅಥವಾ ಅತಿಯಾದ ನಿದ್ದೆ ಇರಬಹುದು. ನಿದ್ದೆಯ ಕ್ರಮದಲ್ಲಿ ತೊಂದರೆಗಳು ಮದ್ಯಪಾನ ಚಟದಿಂದ ಅಥವಾ ನಿದ್ದೆಗುಳಿಗೆಗಳಿಂದಲೂ ಉಂಟಾಗಿರಬಹುದು.

ಆಹಾರಸೇವನೆಯ ಕ್ರಮಗಳಲ್ಲಿ ವ್ಯತ್ಯಯ

ಖನ್ನತೆಯಲ್ಲಿ ನಿದ್ದೆಯ ಕ್ರಮದಲ್ಲಿ ವ್ಯತ್ಯಾಸ ಉಂಟಾಗುವಂತೆಯೇ ಹಸಿವು ನಷ್ಟ ಅಥವಾ ಒತ್ತಡಪೂರ್ವಕ ತಿನ್ನುವಿಕೆ/ ಕಾಬೊìಹೈಡ್ರೇಟ್‌ಗಾಗಿ ಕಾತರಿಸುವಿಕೆ ಕಂಡುಬರಬಹುದು. ಇದರಿಂದಾಗಿ ಗಮನಾರ್ಹ ತೂಕನಷ್ಟ ಅಥವಾ ಅತಿಯಾದ ತೂಕ ಹೆಚ್ಚಿಸಿಕೊಳ್ಳುವಿಕೆ ಉಂಟಾಗಬಹುದು.

ಆತ್ಮವಿಶ್ವಾಸದ ಕೊರತೆ

ವ್ಯಕ್ತಿಯು ಕೀಳರಿಮೆಯಿಂದ ಬಳಲಬಹುದು, ತನ್ನ ಬಗ್ಗೆ ತಾನು ಹಿಂಜರಿಕೆ ಹೊಂದಬಹುದು, ವೈಫ‌ಲ್ಯವನ್ನು ಬೇಗನೆ ಒಪ್ಪಿಕೊಳ್ಳಬಹುದು, ಸಮಾಜ, ಜನಸಮೂಹವನ್ನು ಎದುರಿಸಲು ಹಿಂಜರಿಯಬಹುದು ಅಥವಾ ಹೊಸ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಹಿಂಜರಿಕೆ ಕಂಡುಬರಬಹುದು.

ಏಕಾಗ್ರತೆಯ ಸಮಸ್ಯೆ

ಮನಸ್ಸು ಸತತವಾದ ಋಣಾತ್ಮಕ ಆಲೋಚನೆಗಳಿಂದ ತುಂಬಿರುವ ಕಾರಣ ಯಾವುದೇ ವಿಚಾರ, ಕೆಲಸದ ಬಗ್ಗೆ ಏಕಾಗ್ರತೆ ನೀಡಲು, ಗಮನ ಹರಿಸಲು ತೊಂದರೆ ಉಂಟಾಗಬಹುದು. ಸತತ ಪ್ರಜ್ಞಾಪೂರ್ವಕ ಪ್ರಯತ್ನಗಳ ಹೊರತಾಗಿಯೂ ಚಟುವಟಿಕೆಗಳ ಮೇಲೆ ಏಕಾಗ್ರತೆಯಿಂದ ಗಮನಹರಿಸಲು ತೊಂದರೆಯಾಗಬಹುದು. ಯಾವಾಗ ಗಮನ ಹರಿಸಲು, ಏಕಾಗ್ರತೆಯಿಂದಿರಲು ಸಾಧ್ಯವಾಗುವುದಿಲ್ಲವೋ ಆಗ ಅದು ನೆನಪಿನಲ್ಲಿ ಉಳಿಯುವುದಿಲ್ಲ. ಇದರಿಂದಾಗಿ ನೆನಪಿನಲ್ಲಿ ಉಳಿಯದೆ ಸ್ಮರಿಸಿಕೊಳ್ಳುವುದಕ್ಕೆ ಸಮಸ್ಯೆಯಾಗುವುದು. ಹೀಗಾಗಿ ಮರೆವು ಕಾಡಬಹುದು.

ಭಾವನಾತ್ಮಕ ಏರಿಳಿತಗಳಲ್ಲದೆ ಖನ್ನತೆಯ ಮೇಲ್ಕಂಡ ಲಕ್ಷಣಗಳಲ್ಲಿ ಯಾವುದಾದರೊಂದು ಕಂಡುಬಂದರೂ ವೃತ್ತಿಪರ ವೈದ್ಯರ ಸಹಾಯವನ್ನು ಯಾಚಿಸಿ ಮಾರ್ಗದರ್ಶನ ಪಡೆದುಕೊಳ್ಳುವುದು ಅತ್ಯುತ್ತಮವೆನಿಸುತ್ತದೆ.

– ಡಾ| ಕೃತಿಶ್ರೀ ಸೋಮಣ್ಣ, ಕನ್ಸಲ್ಟಂಟ್‌ ಸೈಕಿಯಾಟ್ರಿಸ್ಟ್‌ ಕೆಎಂಸಿ ಆಸ್ಪತ್ರೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next