ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಕಂಠಪೂರ್ತಿ ಮದ್ಯ ಸೇವಿಸಿದ ಎಂಟು ಮಂದಿ ಸ್ನೇಹಿತರ ನಡುವೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಳ್ಳಂದೂರಿನ ಕಸುವನಹಳ್ಳಿಯಲ್ಲಿ ಸೋಮವಾರ ನಸುಕಿನಲ್ಲಿ ನಡೆದಿದೆ. ಘಟನೆ ಸಂಬಂಧ ಇಬ್ಬರು ಕಾನೂನು ಸಂಘರ್ಘಕ್ಕೊಳಗಾದವರು ಸೇರಿ ಏಳು ಮಂದಿಯನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಸುವನಹಳ್ಳಿ ನಿವಾಸಿ, ಆಟೋ ಚಾಲಕ ಶಿವರಾಮ್ (23) ಕೊಲೆಯಾದವ. ರಾಮ್‌ಕುಮಾರ್ (26), ಮೊಹಮ್ಮದ್ ನಾಜಿರ್ (22), ಸಂತೋಷ್ (24), ಶ್ರೀಧರ್ (22) ಹಾಗೂ ವಿನೋದ್ (22) ಹಾಗೂ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದವರನ್ನು ಬಂಧಿಸಲಾಗಿದೆ. ಆರೋಪಿಗಳು ಹಾಗೂ ಶಿವರಾಮ್ ಕಸುವನಹಳ್ಳಿಯ ಮುಖ್ಯರಸ್ತೆಯಲ್ಲಿರುವ ಸ್ಲಂ ಕ್ವಾಟ್ರರ್ಸ್‌ನಲ್ಲಿ ವಾಸವಿದ್ದು, ಆಪ್ತ ಸ್ನೇಹಿತರು.
ಆರೋಪಿಗಳು ಪೇಂಟಿಂಗ್ ಹಾಗೂ ಇತರೆ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸ್ವಂ ಕ್ವಾಟ್ರರ್ಸ್‌ನ ಮನೆಯೊಂದರಲ್ಲಿ ಪಾರ್ಟಿ ಮಾಡಿದ್ದು, ಎಂಟು ಮಂದಿ ಕಂಠಪೂರ್ತಿ ಮದ್ಯ ಸೇವಿಸಿದ್ದಾರೆ. ಈ ವೇಳೆ ಶಿವರಾಮ್ ಆರೋಪಿಗಳ ಅಪಹಾಸ್ಯ ಮಾಡಿದ್ದಾನೆ.
ವೇಳೆ ಸ್ನೇಹಿರ ನಡುವಿನ ಜಗಳ ವಿಕೋಪಕ್ಕೆ ಹೋದಾಗ ಆರೋಪಿಗಳು ತಮ್ಮ ಬಳಿಯಿದ್ದ ಚಾಕುವಿನಿಂದ ಶಿವರಾಮನ ಎದೆ ಮತ್ತು ಹೊಟ್ಟೆ ಭಾಗಕ್ಕೆ ಇರಿದಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಿದ್ದಿದ್ದ ಶಿವರಾಮ್‌ನನ್ನು ಆರೋಪಿಗಳೇ ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಕೂಡಲೇ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬೆಳ್ಳಂದೂರು ಠಾಣೆ ಪೊಲೀಸರು, ಘಟನೆ ನಡೆದ ಕೇವಲ ಎರಡು ಗಂಟೆಯಲ್ಲೇ ಏಳೂ ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಬೇರೆ ಅಪರಾಧ ಆರೋಪಗಳಿರುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.