ಉಪ್ಪಿನಬೆಟಗೇರಿ: ಗ್ರಾಮದ ಪಾರ್ಶ್ವನಾಥ ಜೈನ ಬಸದಿಯ ಸಭಾಭವನದಲ್ಲಿ ಜರುಗಿದ ಗ್ರಾಮಸಭೆಗೆ ಸಾಕಷ್ಟು ಸಂಖ್ಯೆಯಲ್ಲಿ ಗ್ರಾಮಸ್ಥರು ಆಗಮಿಸಿದ್ದರೂ ಹಾಜರಿದ್ದ ಅಧಿಕಾರಿಗಳು ಮಾತ್ರ 7 ಮಂದಿ!
ಈ ಹಿಂದೆ ಆಯೋಜಿಸಿದ್ದ ಸಭೆಯನ್ನು ಅಧಿಕಾರಿಗಳ ಗೈರಿನ ಹಿನ್ನೆಲೆಯಲ್ಲೇ ಮುಂದೂಡಲಾಗಿತ್ತು. ಇದೀಗ ಮುಂದುವರಿದ ಸಭೆಗೂ ಮತ್ತೆ ಅಧಿಕಾರಿಗಳು ಗೈರಾಗಿದ್ದರಿಂದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಜನತೆಯ ಸಮಸ್ಯೆ ಆಲಿಸಬೇಕಾದ ಅಧಿಕಾರಿಗಳ ಗೈರಿನಲ್ಲಿ ಸಭೆಯನ್ನೇಕೆ ಮಾಡುತ್ತೀರಿ ಎಂದು ಪಿಡಿಒ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಸುರೇಶಬಾಬು ತಳವಾರ ಮಾತನಾಡಿ, ಗ್ರಾಮಕ್ಕೆ ಮಲಪ್ರಭಾ ನದಿ ನೀರಿಗಾಗಿ ವಂತಿಗೆ ಸಂಗ್ರಹಿಸಿ ನೀಡಿದ್ದರೂ 15 ದಿನಕ್ಕೊಮ್ಮೆ ನೀರು ಪೂರೈಸುತ್ತಿದ್ದಾರೆ. ಬೇರೆ ಹಳ್ಳಿಗಳಿಗೆ ಪ್ರತಿದಿನ ನೀರು ಪೂರೈಕೆ ಮಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಗ್ರಾಮದ ಹೊಸ ಬಸ್‌ನಿಲ್ದಾಣವು ಸಂತೆ ಮಾರುಕಟ್ಟೆ ಹಾಗೂ ಖಾಸಗಿ ವಾಹನಗಳ ನಿಲ್ದಾಣವಾಗಿದೆ. ಗ್ರಾಪಂದವರಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಂತವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಗುತ್ತಿಗೆದಾರನಿಗೆ ತಿಳಿಸುವುದಲ್ಲದೆ ಪ್ರತಿ ಶನಿವಾರ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಆಗುವ ತೊಂದರೆ ಸರಿಪಡಿಸಬೇಕು ಎಂದು ಗ್ರಾಮಸ್ಥರು ಸಭೆಯಲ್ಲಿ ಆಗ್ರಹಿಸಿದಾಗ ಗರಗ ಠಾಣೆಯ ಅಧಿಕಾರಿ ಎಚ್.ಎಂ. ನರಗುಂದ ಪ್ರತಿಕ್ರಿಯಿಸಿ, ಅಂತಹವರ ಮೇಲೆ ನಾವು ಕಾನೂನು ರೀತಿ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ನೋಡಲ್ ಅಧಿಕಾರಿ ಬಿ.ಎಲ್. ಓಲೇಕಾರ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಮಹಾವೀರ ಅಷ್ಟಗಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರತ್ನವ್ವ ವಿಜಾಪುರ, ತಾಪಂ ಸದಸ್ಯೆ ಶಾಂತವ್ವ ಸಂಕಣ್ಣವರ, ಪಿಡಿಒ ಪುಷ್ಪಾವತಿ ಮೇದಾರ, ಸದಸ್ಯರಾದ ಶಿವಾನಂದ ಲಗಮಣ್ಣವರ, ಜ್ಯೋತೆಪ್ಪ ಜಾಧವ, ಖಲೀಲಅಹ್ಮದ ಜಾಲೇಗಾರ, ರೇವಣಶಿದ್ದಪ್ಪ ನವಲಗುಂದ, ಮಂಜುನಾಥ ವಿಜಾಪುರ, ಶಾಂತವ್ವ ದೊಡವಾಡ, ವಿದ್ಯಾ ಯಮೋಜಿ, ಆರೋಗ್ಯ ಇಲಾಖೆಯ ಸಿದ್ದು ಕುರಹಟ್ಟಿ, ಕೃಷಿ ಇಲಾಖೆಯ ಎಂ.ಕೆ. ಕಳ್ಳಿಮನಿ, ಅಂಗನವಾಡಿ ಮೇಲ್ವಿಚಾರಕಿ ಸುಜಾತಾ ಮೊದಲಾದವರಿದ್ದರು. ವಿರೂಪಾಕ್ಷಪ್ಪ ಬಮ್ಮಶೆಟ್ಟಿ ನಿರೂಪಿಸಿದರು.