ಕನ್ನಡ ಪ್ರೇಕ್ಷಕನಿಗೆ ಪ್ರತಿ ವಾರವೂ ಸಿನಿಹಬ್ಬ. ವಾರಕ್ಕೆ ನಾಲ್ಕು, ಐದು ಚಿತ್ರಗಳು ಬಿಡುಗಡೆಯಾಗುತ್ತಲೇ ಇವೆ. ಅಂತೆಯೇ ಈ ವಾರವೂ ಕೂಡ ಏಳು ಚಿತ್ರಗಳು ಬಿಡುಗಡೆಯಾಗುತ್ತಿವೆ ಎಂಬುದು ವಿಶೇಷ. ಅದಕ್ಕೆ ಕಾರಣ, ವರ್ಷ ಮುಗಿಯುವ ಕಾಲ. ಡಿಸೆಂಬರ್‌ನಲ್ಲಿ ಇನ್ನೂ ಬಿಗ್ ಸಿನಿಮಾಗಳು ಸಾಲುಗಟ್ಟಿವೆ. ಹಾಗಾಗಿ, ಜಾಗ ಸಿಕ್ಕ ಖುಷಿಯಲ್ಲಿ ನಾನು, ನೀನು, ಅವನು ಎಂಬಂತೆ ಏಳು ಚಿತ್ರಗಳು ಬಿಡುಗಡೆಗೆ ಪಕ್ಕಾ ಆಗಿವೆ. ಈ ಪೈಕಿ ಹೊಸಬರ ಚಿತ್ರಗಳ ಸಾಲೂ ಇದೆ ಎಂಬುದು ವಿಶೇಷ.
ಆ ದೃಶ್ಯ: ನ.8 ರಂದು ಏಳು ಚಿತ್ರಗಳು ಚಿತ್ರಮಂದಿರಗಳಿಗೆ ಲಗ್ಗೆ ಇಡುತ್ತಿವೆ. ಆ ಪೈಕಿ ಯಾವ ಚಿತ್ರಗಳು ಗೆಲುವಿನ ಗಂಟು ಕಟ್ಟುತ್ತವೆ ಅನ್ನೋದು ಗೌಪ್ಯ. ಹೌದು, ನ.15 ರಂದು ಬಿಡುಗಡೆಯಾಗಬೇಕಿದ್ದ “ಆ ದೃಶ್ಯ’ ನ.8 ರಂದು ಬಿಡುಗಡೆಯಾಗುತ್ತಿದೆ. ರವಿಚಂದ್ರನ್ ಅಭಿನಯದ ಈ ಚಿತ್ರದಲ್ಲಿ ಸಸ್ಪೆನ್ಸ್ ಅಂಶಗಳು ತುಂಬಿವೆ. ಶಿವಗಣೇಶ್ ನಿರ್ದೇಶನ ಮಾಡಿದ್ದಾರೆ. ಕೆ.ಮಂಜು ನಿರ್ಮಾಣವಿದೆ. ಈ ಹಿಂದೆ “ದೃಶ್ಯ’ ಮೂಲಕ ರವಿಚಂದ್ರನ್ ಜೋರು ಸದ್ದು ಮಾಡಿದ್ದು ಗೊತ್ತೇ ಇದೆ. ಈಗ “ಆ ದೃಶ್ಯ’ ಕೂಡ ಅಂಥದ್ದೊಂದು ನಿರೀಕ್ಷೆ ಹುಟ್ಟಿಸಿದೆ. ಸದ್ಯಕ್ಕೆ ಚಿತ್ರದ ಪೋಸ್ಟರ್ ಕುತೂಹಲ ಮೂಡಿಸಿದ್ದು, ರವಿಚಂದ್ರನ್ ಅವರಿಲ್ಲಿ ಎರಡು ವಿಶೇಷ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದು 30 ಪ್ಲಸ್ ಪಾತ್ರ ಇನ್ನೊಂದು ಮೆಚೂÂರ್x ಆಗಿರುವ ವ್ಯಕ್ತಿಯಾಗಿಯೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಸುಮಾರು 250 ಪ್ಲಸ್ ಚಿತ್ರಮಂದಿರಗಳಲ್ಲಿ “ಆ ದೃಶ್ಯ’ ತೆರೆ ಕಾಣುತ್ತಿದೆ.
ರಣಭೂಮಿ: ನಿರಂಜನ್ ಒಡೆಯರ್ ಹಾಗು ಕಾರುಣ್ಯರಾವ್ ಅಭಿನಯದ “ರಣಭೂಮಿ’ ಕೂಡ ನ.8 ರಂದು ಬಿಡುಗಡೆಯಾಗುತ್ತಿದೆ. ಈ ಹಿಂದೆ “ಜೋಕಾಲಿ’ ನಿರ್ದೇಶಿಸಿದ್ದ ಚಿರಂಜೀವಿ ದೀಪಕ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಮಂಜುನಾಥ್ ಪ್ರಭು ಮತ್ತು ಹೇಮಂತ್ ದೇಶಹಳ್ಳಿ ಅವರೊಂದಿಗೆ ದೀಪಕ್ ಕೂಡ ನಿರ್ಮಾಣ ಮಾಡಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಶೀತಲ್‌ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಇದೂ ಕೂಡ ಸಸ್ಪೆನ್ಸ್ ಮತ್ತು ಹಾರರ್ ಚಿತ್ರ. ಚಿತ್ರಕ್ಕೆ “ಹುಟ್ಟು ಅನಿವಾರ್ಯ ಆದ್ರೆ ಸಾವು ಚರಿತ್ರೆ ಆಗಬೇಕು’ ಎಂಬ ಅಡಿಬರಹವಿದೆ. ಈ ಚಿತ್ರದಲ್ಲಿ ನಿರಂಜನ್ ಒಡೆಯರ್ ಅವರು ಒಬ್ಬ ಟೆಕ್ಕಿಯಾಗಿ ಕಾಣಿಸಿಕೊಂಡಿದ್ದಾರೆ. ಪ್ರದೀಪ್ ವರ್ಮಾ ಸಂಗೀತವಿದೆ. ನಾಗಾರ್ಜುನ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ವಿಕ್ರಮ್ ಸಾಹಸವಿದೆ, “ಕರ್ವ’ ಖ್ಯಾತಿಯ ವೆಂಕಿ ಸಂಕಲನ ಮಾಡಿದ್ದಾರೆ. ಚಿತ್ರದಲ್ಲಿ ಆರ್ ಭಟ್, “ರಥಾವರ’ ಲೋಕಿ, ಡ್ಯಾನಿ ಕುಟ್ಟಪ್ಪ, ಮುನಿ ಸೇರಿದಂತೆ ಹಲವರು ನಟಿಸಿದ್ದಾರೆ.
ಕಪಟನಾಟಕ ಪಾತ್ರಧಾರಿ: ಇನ್ನು, “ಕಪಟನಾಟಕ ಪಾತ್ರಧಾರಿ’ ಚಿತ್ರವನ್ನು ಕ್ರಿಶ್ ನಿರ್ದೇಶನ ಮಾಡಿದ್ದಾರೆ. ಶೀರ್ಷಿಕೆ ವಿಭಿನ್ನವಾಗಿರುವಂತೆ, ಚಿತ್ರದ ಕಥೆ ಕೂಡ ಭಿನ್ನವಾಗಿದೆ. ಈಗಾಗಲೇ ಚಿತ್ರದ ಟ್ರೇಲರ್ ಹಾಗು ಹಾಡುಗಳು ಸದ್ದು ಮಾಡಿವೆ. ಇದೊಂದು ಥ್ರಿಲ್ಲರ್ ಜಾನರ್ ಕಥೆಯಾಗಿದ್ದು, ಒಬ್ಬ ಆಟೋ ಡ್ರೈವರ್ ಸುತ್ತ ಸಾಗುತ್ತದೆ. ಚಿತ್ರದಲ್ಲಿ ಲವ್‌ಸ್ಟೋರಿ ಕೂಡ ಇದೆ. ಬಾಲು ನಾಗೇಂದ್ರ ನಾಯಕರಾದರೆ, ಅವರಿಗೆ ಸಂಗೀತಾ ಭಟ್ ನಾಯಕಿ. ಚಿತ್ರಕ್ಕೆ ಅದಿಲ್ ನದಾಫ್ ಸಂಗೀತವಿದೆ.
ಗಿರ್ಮಿಟ್: ರವಿಬಸ್ರೂರ್ ನಿರ್ದೇಶನದ “ಗಿರ್ಮಿಟ್’ ಎಂಬ ವಿಶೇಷ ಚಿತ್ರ ಕೂಡ ಬಿಡುಗಡೆಯಾಗುತ್ತಿದೆ. ಇದೊಂದು ಹೊಸ ಪ್ರಯತ್ನದ ಚಿತ್ರ. ಇಲ್ಲಿ ಮಕ್ಕಳೇ ಸ್ಟಾರ್. ಪ್ರತಿಭಾವಂತ ಮಕ್ಕಳನ್ನೇ ಆಯ್ಕೆ ಮಾಡಿಕೊಂಡು “ಗಿರ್ಮಿಟ್’ ಮಾಡಲಾಗಿದೆ. ಎನ್.ಎಸ್.ರಾಜಕುಮಾರ್ ನಿರ್ಮಾಪಕರು. ಚಿತ್ರದ ವಿಶೇಷವೆಂದರೆ, ಇಲ್ಲಿ ಮಕ್ಕಳೇ ಆವರಿಸಿದ್ದಾರೆ. ಹಾಗಂತ ಇದು ಮಕ್ಕಳ ಸಿನಿಮಾವಲ್ಲ, ಕಲಾತ್ಮಕ ಚಿತ್ರವಂತೂ ಅಲ್ಲ. ಈಗ ಕನ್ನಡದಲ್ಲಿ ಬರುತ್ತಿರುವ ಸ್ಟಾರ್ ಸಿನಿಮಾಗಳ ಸಾಲಿಗೆ ಈ ಚಿತ್ರವೂ ಸೇರಲಿದೆ ಅಂದರೆ ಅಚ್ಚರಿ ಪಡಬೇಕಿಲ್ಲ. ಕಾರಣ, ಇಲ್ಲಿ ಸ್ಟಾರ್‌ನಟರಷ್ಟೇ ವ್ಯಾಲ್ಯು ಮಕ್ಕಳಿಗೂ ಕೊಡಲಾಗಿದೆ. ಚಿತ್ರದಲ್ಲಿ ಆಶ್ಲೇಷ್ ರಾಜ್, ಶ್ಲಾಘಾ ಸಾಲಿಗ್ರಾಮ,ನಾಗರಾಜ್ ಜಪ್ತಿ, ಶ್ರಾವ್ಯಾ, ತನಿಶಾ ಕೋಣೆ, ಆದಿತ್ಯ, ಸಹನ ಬಸ್ರೂರ್, ಪವಿತ್ರ, ಜಯೇಂದ್ರ, ಸಿಂಚನ, ಮನೀಶ್ ಶೆಟ್ಟಿ, ಸಾರ್ಥಕ್ ಶೆಣೈ, ಮಹೇಂದ್ರ ಮತ್ತು ಪವನ್ ಬಸ್ರೂರ್ ನಟಿಸಿದ್ದಾರೆ. ಸಚಿನ್ ಬಸ್ರೂರ್ ಛಾಯಾಗ್ರಹಣವಿದೆ. ರವಿಬಸ್ರೂರ್ ಸಂಗೀತವಿದೆ.
ರಣಹೇಡಿ: ಕರ್ಣ ಕುಮಾರ್ ಅಭಿನಯದ “ರಣಹೇಡಿ’ ಚಿತ್ರವನ್ನು ಮನು.ಕೆ.ಶೆಟ್ಟಿಹಳ್ಳಿ ನಿರ್ದೇಶನ ಮಾಡಿದ್ದಾರೆ. ಇದೊಂದು ರೈತರ ಆತ್ಮಹತ್ಯೆ ಹಿನ್ನೆಲೆಯಲ್ಲಿ ಸಾಗುವ ಕಥೆ. ರೈತರ ವೈಯಕ್ತಿಕ ಸಮಸ್ಯೆಯಿಂದ ಆತ್ಮಹತ್ಯೆ ಆಗುವುದು ಮತ್ತು ಬೆಳೆ ನಷ್ಟ, ಸಾಲ ಹಿನ್ನೆಲೆಯಲ್ಲೂ ಆತ್ಮಹತ್ಯೆ ಆಗುವುದರ ಕುರಿತ ಚಿತ್ರಣವಿದೆ. ಸುಮಾರು 35 ದಿನಗಳ ಕಾಲ ಚಿತ್ರೀಕರಿಸಿದ್ದು, ಚಿತ್ರದಲ್ಲಿ ಬಹುತೇಕ ಹೊಸ ಪ್ರತಿಭೆಗಳ ಜೊತೆಯಲ್ಲಿ ಅಚ್ಯುತಕುಮಾರ್, ಗಿರಿ, ಷಫಿ ಇತರರು ನಟಿಸಿದ್ದಾರೆ. ವಿ.ಮನೋಹರ್ ಸಂಗೀತವಿದೆ. ಕುಮಾರ್ ಗೌಡ ಛಾಯಾಗ್ರಾಹಣವಿದೆ.
ಪಾಪಿ ಚಿರಾಯು: ಹೊಸಬರು ಮಾಡಿರುವ “ಪಾಪಿ ಚಿರಾಯು’ ಚಿತ್ರವನ್ನು ನಟರಾಜ್ ಜಿ.ಕೆ.ಗೌಡ ನಿರ್ದೇಶಿಸಿದ್ದಾರೆ. ಬಿ.ಬಸವರಾಜು ನಿರ್ಮಿಸಿದ್ದಾರೆ. ಚಿಂದಿ ಆಯುವ ಹುಡುಗನಿಗೆ ವೈಶ್ಯೆಯೊಬ್ಬಳ ಮೇಲೆ ಪ್ರೀತಿಯಾಗುತ್ತೆ. ಅವರಿಬ್ಬರೂ ಒಂದಾದಾಗ ಸಮಾಜ ಅವರನ್ನು ಹೇಗೆ ಕಾಣುತ್ತೆ ಎಂಬುದು ಕಥೆ. ರಾಜ್.ಬಿ.ಗೌಡ, ಕುರಿಪ್ರತಾಪ್, ನಿರಂಜನ್ ದೇಶಪಾಂಡೆ, ಮಂಜು, ಚೈತ್ರ ಇತರರು ನಟಿಸಿದ್ದಾರೆ. ಮಂಜುನಾಥ್ ಬಿ.ಪಾಟೀಲ್ ಕ್ಯಾಮೆರಾ ಹಿಡಿದರೆ, ಜೈ ಮೋಹನ್ ಸಂಗೀತವಿದೆ.
ಈಶ-ಮಹೇಶ: ಇದು ಕೂಡ ಹೊಸಬರ ಚಿತ್ರ. ನಟರಾಜ್ ಮಂಚಯ್ಯ ನಿರ್ಮಾಣದ ಚಿತ್ರವನ್ನು ಎಂ.ಡಿ.ಕೌಶಿಕ್ ನಿರ್ದೇಶನ ಮಾಡಿದ್ದಾರೆ. ಹಂಸರಾಜ್ ಚಿತ್ರಕಥೆ ಬರೆದರೆ, ನಿರ್ಮಾಪಕ ನಟರಾಜ್ ಮಂಚಯ್ಯ ಕಥೆ, ಸಂಭಾಷಣೆ ಬರೆದಿದ್ದಾರೆ. ಮನೋಹರ್ ಸಂಗೀತವಿದೆ. ರಮೇಶ್ ಛಾಯಾಗ್ರಹಣವಿದೆ. ನರಸಿಂಹ ಪ್ರಸಾದ್ ಸಂಕಲನ ಮಾಡಿದ್ದಾರೆ. ಹಂಸರಾಜ್ ಚಿತ್ರಕಥೆ ಬರೆದಿದ್ದಾರೆ. ಚಿತ್ರದಲ್ಲಿ ನಾರಾಯಣಸ್ವಾಮಿ, ರಾಕೇಶ್, ಜಯಶ್ರೀರಾಜ್, ಶರಣ್ಯ ಗೌಡ, ಹಂಸರಾಜ್, ಭಾಗ್ಯಶ್ರೀ ಎಂ.ಡಿ.ಕೌಶಿಕ್, ರವಿಭಟ್ ಇತರರು ನಟಿಸಿದ್ದಾರೆ. ಇದರ ಜೊತೆಗೆ “ಜಬರ್‌ದಸ್ತ್ ಶಂಕರ’ ಎಂಬ ತುಳು ಸಿನಿಮಾವೂ ನ.08ಕ್ಕೆ ತೆರೆಕಾಣುತ್ತಿದೆ.