ತಿರುವಣ್ಣಾಮಲೈ(ತಮಿಳುನಾಡು): ಬಸ್ -ಎಸ್ ಯುವಿ ನಡುವಿನ ಮುಖಾಮುಖಿ ಢಿಕ್ಕಿಯ ಪರಿಣಾಮ 7 ಮಂದಿ ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ಸೋಮವಾರ ರಾತ್ರಿ (ಅ.23 ರಂದು) ತಿರುವಣ್ಣಾಮಲೈ ಜಿಲ್ಲೆಯ ಚೆಂಗಂ ಪಟ್ಟಣದಲ್ಲಿ ನಡೆದಿದೆ.
ಎಸ್ ಯುವಿ ಕಾರಿನಲ್ಲಿ 11 ಮಂದಿ ಪ್ರಯಾಣಿಸುತ್ತಿದ್ದರು. ಇವೆರಲ್ಲ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಹೊಸೂರು ಸಮೀಪವಿರುವ ತಮ್ಮ ಕಾರ್ಖಾನೆಯ ಆಯುಧ ಪೂಜೆ ಮುಗಿಸಿ ಬರುವ ವೇಳೆ ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆಯ (ಟಿಎನ್‌ಎಸ್‌ಟಿಸಿ) ಬಸ್‌ಗೆ ತಿಂಡಿವನಂ-ಕೃಷ್ಣಗಿರಿ ರಾಷ್ಟ್ರೀಯ ಹೆದ್ದಾರಿ 77 ಯಲ್ಲಿ ಎಸ್ ಯುವಿ ಮುಖಾಮುಖಿಯಾಗಿ ಢಿಕ್ಕಿ ಹೊಡೆದಿದೆ. ಪರಿಣಾಮ ಅಸ್ಸಾಂ ಮೂಲದ ಐವರು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ.
ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಸ್ಸಾಂನ ಹಿನ್ಮಲ್ ತೀರ್ಥ್, ಕುಂಚ ರೈ, ದಲ್ಲು, ನಿಕೋಲಸ್ ಮತ್ತು ನಾರಾಯಣ ಸೇಥಿ ಮತ್ತು ಚಾಲಕ ಪುನಿತ್ ಕುಮಾರ್ ಮತ್ತು ಕೃಷ್ಣಗಿರಿ ಜಿಲ್ಲೆಯ ಕಾಮರಾಜ್ ಮೃತರು ಎಂದು ಪೊಲೀಸರು ತಿಳಿಸಿರುವುದಾಗಿ ವರದಿ ತಿಳಿಸಿದೆ.
ಟಿಎನ್‌ಎಸ್‌ಟಿಸಿ ಬಸ್‌ನ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಅಕ್ಟೋಬರ್ 15 ರಂದು ಚೆಂಗಮ್ ಪಟ್ಟಣದಲ್ಲೇ ಭೀಕರ ಅಪಘಾತವೊಂದು ನಡೆದಿತ್ತು. ಚೆಂಗಂ ಪಟ್ಟಣದ ಬಳಿ ಲಾರಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಮತ್ತು ಮಹಿಳೆ ಸೇರಿದಂತೆ 7 ಮಂದಿ ಸಾವನ್ನಪ್ಪಿದ್ದರು.