ಬೆಂಗಳೂರು: ಕೋವಿಡ್-19 ರೂಪಾಂತರಿ ಒಮಿಕ್ರಾನ್ ಭೀತಿಯ ಹಿನ್ನೆಲೆಯಲ್ಲಿ ವಿದೇಶದಿಂದ ಬರುವ ಎಲ್ಲರಿಗೂ ಇಂದಿನಿಂದ ವಿಮಾನ ನಿಲ್ದಾಣದಲ್ಲಿ ಆರ್ ಟಿಪಿಸಿಆರ್ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಅವರು ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಡಿರುವ ಸಿದ್ಧತೆಗಳನ್ನು ಪರಿಶೀಲಿಸಿದರು.
ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಆರ್ ಟಿಪಿಸಿಆರ್ ಟೆಸ್ಟ್ ನಿಂದ ನೆಗೆಟಿವ್ ವರದಿ ಬಂದರೂ ಅವರ ಮನೆಯಲ್ಲೇ ಏಳು ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಬೇಕು. ಅವರನ್ನು ಕ್ವಾರಂಟೈನ್ ಆ್ಯಪ್ ಮೂಲಕ ಗಮನಿಸುವ ಕೆಲಸ ಮಾಡಲಾಗುತ್ತದೆ. ರೋಗ ಲಕ್ಷಣಗಳಿದ್ದು, ವರದಿಯಲ್ಲಿ ನೆಗೆಟಿವ್ ತೋರಿಸಿದರೆ ಐದು ದಿನಗಳ ಕಾಲ ಹೋಂ ಕ್ವಾರಂಟೈನ್ ಬಳಿಕ ಮತ್ತೊಮ್ಮೆ ಪರೀಕ್ಷಿಸಲಾಗುವುದು. ಆಗಲೂ ನೆಗೆಟಿವ್ ಬಂದರೆ, ಮತ್ತೆ ಏಳು ದಿನಗಳ ಹೋಂ ಕ್ವಾರಂಟೈನ್ ಕಡ್ಡಾಯವಾಗಿದೆ ಎಂದರು.
ಇದನ್ನೂ ಓದಿ:ಬೂಸ್ಟರ್ ಡೋಸ್ ಕುರಿತು ಕೇಂದ್ರ ಸಚಿವರೊಂದಿಗೆ ಚರ್ಚೆ ನಡೆಸುತ್ತೇವೆ: ಸಿಎಂ ಬೊಮ್ಮಾಯಿ
ಪಾಸಿಟಿವ್ ವರದಿ ಬಂದವರಿಗೆ ನೇರ ಪ್ರತ್ಯೇಕವಾಗಿ ತೆರೆದ ಐಸೋಲೇಟೆಡ್ ವಾರ್ಡ್ ಗೆ ಸ್ಥಳಾಂತರಿಸಿ ಸೂಕ್ತ ಚಿಕಿತ್ಸೆ, ಆರೈಕೆ ವ್ಯವಸ್ಥೆ ಮಾಡಲಾಗುವುದು. ಮುಖ್ಯಮಂತ್ರಿ ಸೂಚನೆಯಂತೆ ಸ್ವಲ್ಪ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.