Advertisement

ಏಳು ದೂರು ಸ್ವೀಕಾರ, ಮುಕ್ತ ತನಿಖೆ: ಶ್ರೀಹರಿಬಾಬು

01:18 PM Feb 26, 2022 | Team Udayavani |

ಸಿಂಧನೂರು: ಸರಕಾರಿ ನೌಕರರು ಯಾವುದೇ ರೀತಿಯ ಗಿಫ್ಟ್‌, ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂಬ ದೂರುಗಳು ಸಲ್ಲಿಕೆಯಾದಲ್ಲಿ ಮುಕ್ತವಾಗಿ ತನಿಖೆ ನಡೆಸಲಾಗುವುದು ಎಂದು ಭ್ರಷ್ಟಾಚಾರ ನಿಗ್ರಹ ದಳದ ಬಳ್ಳಾರಿ ವಲಯ ಪೊಲೀಸ್‌ ಅಧಿಧೀಕ್ಷಕ ಶ್ರೀಹರಿಬಾಬು ಹೇಳಿದರು.

Advertisement

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ಈ ದಿನ ಏಳು ಅರ್ಜಿಗಳನ್ನು ಸ್ವೀಕಾರ ಮಾಡಲಾಗಿದೆ. ಅವುಗಳಲ್ಲಿ ಲಂಚ ಕೇಳಿದ ಕುರಿತು ದೂರುಗಳಿವೆ. ಯಾವುದೇ ವಿವರವನ್ನು ಈ ಹಂತದಲ್ಲಿ ಹೇಳಲು ಬರುವುದಿಲ್ಲ. ಬಹುತೇಕರು ಮೌಖೀಕವಾಗಿ ದೂರು ಸಲ್ಲಿಕೆ ಮಾಡಿದ್ದಾರೆ. ಭ್ರಷ್ಟಾಚಾರ ನಿರ್ಮೂಲನೆಯ ನಿಟ್ಟಿನಲ್ಲಿ ಕರ್ನಾಟಕ ಸರಕಾರ ರೂಪಿಸಿರುವ ಕಾಯಿದೆ ಅನುಸಾರ ಸಾರ್ವಜನಿಕರು ಮುಕ್ತವಾಗಿ ದೂರು ಸಲ್ಲಿಕೆ ಮಾಡಬಹುದು. ಆ ಕುರಿತು ಬಂದವರಿಗೆ ಮನವರಿಕೆ ಮಾಡಲಾಗಿದೆ ಎಂದರು.

ಎಲ್ಲ ಸರಕಾರಿ ಕಚೇರಿಗಳಲ್ಲೂ ಸಾರ್ವಜನಿಕರಿಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಂಬಂಧಿ ಸಿ ಮಾಹಿತಿ ಫಲಕ ಹಾಕುವಂತೆ ಈಗಾಗಲೇ ಪತ್ರ ಬರೆಯಲಾಗಿದೆ. ಲಂಚ ಕೇಳಿದ ಸಂದರ್ಭದಲ್ಲಿ ಜನ ಯಾರನ್ನೂ ಸಂಪರ್ಕ ಮಾಡಬೇಕೆಂಬ ಕುರಿತು ಅಲ್ಲಿ ದೂರವಾಣಿ ಸಂಖ್ಯೆಗಳನ್ನು ನಮೂದಿಸಲಾಗುತ್ತದೆ. ಜನ ಹಿಂದೇಟು ಹಾಕುವ ಅಗತ್ಯವಿಲ್ಲ. ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟಾದ ಪ್ರಕರಣದಲ್ಲೂ ಕೂಡ ನಾವು ತನಿಖೆ ನಡೆಸಲು ಅವಕಾಶ ಇದೆ. ಸಿಂಧನೂರಿನ ಒಂದು ಪ್ರಕರಣದ ಮಾಹಿತಿಯಿದ್ದು, ಮೇಲ್ನೋಟಕ್ಕೆ ಆರೋಪ ಸಾಬೀತಾಗುವ ಲಕ್ಷಣ ಕಂಡುಬಂದಾಗ ಮಾತ್ರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ನಗರಸಭೆಯಲ್ಲಿ ಎಸಿಬಿ ನಡೆಸಿದ್ದ ದಾಳಿಗೆ ಸಂಬಂಧಿಸಿ ಕಡತ ಪರಿಶೀಲನೆ ಚುರುಕುಗೊಳಿಸಲಾಗಿದೆ. ಈವರೆಗೂ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿಲ್ಲ ಎಂದರು.

ಡಿವೈಎಸ್ಪಿ ವಿಜಯಕುಮಾರ್‌, ಇನ್‌ ಸ್ಪೆಕ್ಟರ್‌ ಹಸೇನ್‌ಸಾಬ್‌, ಪೊಲೀಸ್‌ ಹೆಡ್‌ಕಾನ್‌ಸ್ಟೇಬಲ್‌ ವಿಕ್ರಂಸಿಂಹರೆಡ್ಡಿ, ವಿನೋದ್‌ರಾಜ್‌, ಸಿಬ್ಬಂದಿಗಳಾದ ಅಶೋಕ, ತಿಪ್ಪಣ್ಣ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next