ವರದಿ: ದೀಪಕ್ ಹೆಗಡೆ ಜಡ್ಡಿಮನೆ
ಹುಬ್ಬಳ್ಳಿ: ಸಂಕಷ್ಟದಲ್ಲಿ ಒಂದು ಕೈಯಿಂದ ಪರಿಹಾರ ನೀಡಿದ ಸರ್ಕಾರ ಇನ್ನೊಂದು ಕೈಯಿಂದ “ಲಾಕ್’ ಮಾಡಿದೆ. ಅರ್ಹರು ಪರಿಹಾರ ಪಡೆಯಲು ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದ್ದರೆ, ಕಟ್ಟುನಿಟ್ಟಿನ ಲಾಕ್‌ಡೌನ್ ಹಿನ್ನೆಲೆಯಲ್ಲಿ ಆನ್ ಲೈನ್ ಸೆಂಟರ್‌ಗಳು, ಸಿಎಸ್‌ಸಿ ಕೇಂದ್ರದ ಬಾಗಿಲುಗಳಿಗೆ ಬೀಗ ಹಾಕಿದೆ. ಹೀಗಾಗಿ ಫಲಾನುಭವಿಗಳು ಪರದಾಡುವಂತಾಗಿದೆ.
ಸರ್ಕಾರದ ಭಾಗವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಹುತೇಕ ಯೋಜನೆಗಳು ಯಶಸ್ವಿಯಾಗಲು ಕಾಮನ್ ಸರ್ವಿಸ್ ಸೆಂಟರ್ (ಸಿಎಸ್‌ಸಿ) ಸೇವಾ ಸಿಂಧು ಪಾತ್ರ ಪ್ರಮುಖವಾಗಿದೆ.
ಈಗ ಸಾಮಾನ್ಯ ಜನತೆ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದು ತಪ್ಪಿದೆ. ಕರ್ಫ್ಯೂ ಜಾರಿಯಾದಾಗಿನಿಂದ ಎಲ್ಲ ಸಿಎಸ್‌ಸಿ, ಸೇವಾ ಸಿಂಧು ಕಚೇರಿಗಳು ಬಾಗಿಲು ಹಾಕುವಂತಾಗಿದೆ. ಸರ್ಕಾರ ಹಲವು ವರ್ಗಗಳಿಗೆ ಆರ್ಥಿಕ ಸಹಾಯ ಘೋಷಣೆ ಮಾಡಿದೆ. ಆದರೆ, ಅದನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸುವ ಸೇವಾ ಸಿಂಧು ಕಚೇರಿಗಳನ್ನೇ ಬಂದ್ ಮಾಡಿಸಿದೆ. ಹೀಗಾದರೆ ಸರ್ಕಾರ ಘೋಷಿಸಿರುವ ಆರ್ಥಿಕ ಪ್ಯಾಕೇಜ್ ತಲುಪಿಸುವುದಾದರೂ ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ. ಫಲಾನುಭವಿಗಳು ಯಾರ್ಯಾರು?: ಮೊದಲ ಹಂತದ ಪ್ಯಾಕೇಜ್‌ನಲ್ಲಿ ಕಲಾವಿದರು, ಟ್ಯಾಕ್ಸಿ ಹಾಗೂ ಆಟೋ ಡ್ರೈವರ್, ಕಟ್ಟಡ ಕಾರ್ಮಿಕರು ಫಲಾನುಭವಿಗಳಾಗಿದ್ದಾರೆ. ತಲಾ ಮೂರು ಸಾವಿರ ರೂ. ಸಹಾಯಧನ ನೀಡುತ್ತಿದ್ದು, ಅರ್ಜಿ ಸಲ್ಲಿಕೆಗೆ ಜೂ.5 ಕೊನೆ ದಿನ. ಕಲಾವಿದರು, ಟ್ಯಾಕ್ಸಿ ಹಾಗೂ ಆಟೋ ಡ್ರೈವರ್ ಗಳು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯ. ಆದರೆ, ಕಾರ್ಮಿಕ ಇಲಾಖೆಯಲ್ಲಿ ನೋಂದಣಿಯಾಗಿರುವ ಕಟ್ಟಡ ಕಾರ್ಮಿಕರ ಖಾತೆಗೆ ಸಹಾಯಧನ ನೇರವಾಗಿ ಜಮಾ ಆಗಲಿದೆ. ಅವರು ಅರ್ಜಿ ಸಲ್ಲಿಸಬೇಕೆಂದಿಲ್ಲ. ಆದರೆ ಹೊಸದಾಗಿ ನೋಂದಣಿ ಮಾಡಿಸಲು, ರಿನಿವಲ್ ಮಾಡಲು ಆನ್‌ಲೈನ್ ಸೆಂಟರ್‌ಗಳತ್ತ ಮುಖ ಮಾಡಲೇಬೇಕಿದೆ. ಮೊಬೈಲ್‌ನಲ್ಲಿ ಅರ್ಜಿ ಸಲ್ಲಿಕೆ ಸಾಧ್ಯವಿಲ್ಲ ಹೀಗಾಗಿ ಸರ್ಕಾರ ಸೇವಾಸಿಂಧು ಕೇಂದ್ರ ಆರಂಭಕ್ಕೆ ಅನುಮತಿ ನೀಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಸರ್ಕಾರದ ಇಬ್ಬಗೆ ನೀತಿ: ಎರಡು ವರ್ಷಗಳ ಹಿಂದೆ ಬ್ಯಾಡ್ಜ್ ನಿಯಮ ಸಡಿಲಿಕೆ ಮಾಡಿರುವ ಸಾರಿಗೆ ಇಲಾಖೆ, ಲೈಟ್ ಮೋಟಾರ್ ವೆಹಿಕಲ್ (ಎಲ್‌ಎಂವಿ) ಲೈಸೆನ್ಸ್ ಇದ್ದರೆ ವಾಣಿಜ್ಯ ವಾಹನಗಳನ್ನು ಓಡಿಸಬಹುದು ಎಂದು ನಿಯಮ ಜಾರಿಗೊಳಿಸಿತ್ತು. ಹೀಗಾಗಿ ಬಹುತೇಕರಲ್ಲಿ ಬ್ಯಾಡ್ಜ್ ಇಲ್ಲ. ಆದರೆ, ರಾಜ್ಯ ಸರ್ಕಾರ ಟ್ಯಾಕ್ಸಿ ಹಾಗೂ ಆಟೋ ಡ್ರೈವರ್ ಗಳಿಗೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದು, ಅರ್ಜಿ ಸಲ್ಲಿಸುವಾಗ ಬ್ಯಾಡ್ಜ್ ಎಲ್ ಎಂವಿ(ಕ್ಯಾಬ್) ಎಂದು ಇಲ್ಲದ ಲೈಸೆನ್ಸ್‌ಗಳನ್ನು ತಿರಸ್ಕರಿಸಿದೆ.