ಗಂಗಾವತಿ: ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರಪೂರ ಕೊಡುಗೆ ನೀಡಿದ್ದಾರೆ. ಆದರೆ ಫಲಾನುಭವಿಗಳಿಗೆ ಸೇವಾ ಸಿಂಧು ವೆಬ್ ಸೈಟ್ ಮೂಲಕ ಅರ್ಜಿ ಹಾಕಲು ಆಗುತ್ತಿಲ್ಲ.
ಹಲವು ದಾಖಲೆಗಳ ಸಮೇತ ಅರ್ಜಿ ಸಲ್ಲಿಸಲು ಮುಂದಾದರೆ ಸಾಫ್ಟವೇರ್ ತಯಾರಿಕೆ ಹಂತದಲ್ಲಿದ್ದು, ಶೀಘ್ರ ಅರ್ಜಿ ಸ್ವೀಕಾರ ಮಾಡಲಾಗುತ್ತದೆ ಎನ್ನುತ್ತಾರೆ ಸಂಬಂಧಿಸಿದವರು. ಅಸಂಘಟಿತ ವಲಯದ ಕಟ್ಟಡ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ದಾಖಲಾತಿ ಸಮೇತ ಅರ್ಜಿ ಸಲ್ಲಿಸಿದ್ದು, ಈಗಾಗಲೇ ಮೊದಲ ಹಂತದಲ್ಲಿ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ 2 ಸಾವಿರ ಮತ್ತು 5 ಸಾವಿರ ರೂ. ಖಾತೆಗೆ ಜಮಾ ಮಾಡಲಾಗಿದೆ. ಉಳಿದಂತೆ ಅರ್ಜಿ ಸಲ್ಲಿಸಿದ ಗುರುತಿನ ಚೀಟಿ ಇರುವ ಪ್ರತಿಯೊಬ್ಬ ಕಟ್ಟಡ ಕಾರ್ಮಿಕನಿಗೆ 5 ಸಾವಿರ ರೂ. ಜಮಾ ಮಾಡಲಾಗುತ್ತದೆ.
ಆಟೋ-ಟ್ಯಾಕ್ಸಿ, ನೇಕಾರ, ಮಡಿವಾಳ ಸೇರಿ ಕುಶಲಕರ್ಮಿಗಳಿಗೂ ಸರಕಾರ ಸಂಕಷ್ಟ ಪರಿಹಾರ ನೀಡಲು ಮುಂದಾಗಿದ್ದು, ಸೇವಾ ಸಿಂಧು ವೆಬ್ ಮೂಲಕ ಅಗತ್ಯ ಜಾತಿ ಪ್ರಮಾಣ ಪತ್ರ, ಕುಶಲಕರ್ಮಿಗಳಾಗಿದ್ದರೆ ಕಾರ್ಮಿಕ ಇಲಾಖೆಯಲ್ಲಿ ಪಡೆದ ಗುರುತಿನ ಚೀಟಿ, ಅಸಂಘಟಿತ ವಲಯದವರಾಗಿದ್ದರೆ. ನಗರಸಭೆಯಿಂದ ಪಡೆದ ಗುರುತಿನ ಚೀಟಿ ದಾಖಲಾತಿ ಜತೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ನಗರ ಪ್ರದೇಶದಲ್ಲಿ ಹಣ್ಣು, ತರಕಾರಿ, ಚಪ್ಪಲಿ ರಿಪೇರಿ ಮಾಡುವವರು ಗೂಡಂಗಡಿಗಳ ಮೂಲಕ ವ್ಯಾಪಾರ ಮಾಡುವವರು ಜೋಗೇರ್, ಮಾಂಸ ಮಾರಾಟಗಾರರು, ಹೋಟೆಲ್‌ಗಳಲ್ಲಿ ಕೆಲಸ ಮಾಡುವವರು ಗಂಜ್ ಮತ್ತು ಬಜಾರ್ ಹಮಾಲಿ ಕಾರ್ಮಿಕರಿಗೆ ಸರಕಾರ ಸಂಕಷ್ಟ ಪರಿಹಾರ ಘೋಷಿಸಿಲ್ಲ. ವಿವಿಧ ಕಾರ್ಮಿಕ ಸಂಘಟನೆಗಳು ಅಸಂಘಟಿತ ವಲಯದಲ್ಲಿ ಇವರನ್ನು ಪರಿಗಣಿಸುವಂತೆ ಸರಕಾರಕ್ಕೆ ಒತ್ತಾಯಿಸಿವೆ.
ಅಸಂಘಟಿತ ವಲಯದ ಕಟ್ಟಡ ಕಾರ್ಮಿಕರಿಗೆ ಈಗಾಗಲೇ ಮೊದಲ ಹಂತದಲ್ಲಿ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದ್ದು, ಮಡಿವಾಳರು, ನೇಕಾರರು ಮತ್ತು ಕುಶಲಕರ್ಮಿಗಳಿಗೆ ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ಅರ್ಜಿ ಸ್ವೀಕರಿಸಿ ಹಣ ಜಮಾ ಮಾಡಲಾಗುತ್ತದೆ. ಸೇವಾ ಸಿಂಧು ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕಾರ ಮಾಡಲು ಸಾಫ್ಟವೇರ್ ತಯಾರಿಕೆ ಪೂರ್ಣಗೊಂಡಿದ್ದು, ಶೀಘ್ರ ಅರ್ಜಿ ಸ್ವೀಕರಿಸಲಾಗುತ್ತದೆ. –
ಶಿವರಾಂ ಹೆಬ್ಟಾರ್, ಕಾರ್ಮಿಕ ಖಾತೆ ಸಚಿವ
ವಾರದಿಂದ ಕಂಪ್ಯೂಟರ್ ಕೇಂದ್ರಗಳಿಗೆ ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ಸಂಕಷ್ಟ ಪರಿಹಾರ ಭತ್ಯೆ ಪಡೆಯಲು ಅಲೆದಾಡುತ್ತಿದ್ದು ವೆಬ್‌ಸೈಟ್ ಕೆಲಸ ಮಾಡುತ್ತಿಲ್ಲ. ಇದರಿಂದ ಅರ್ಜಿ ಸಲ್ಲಿಸಲು ಆಗುತ್ತಿಲ್ಲ. ಸರಕಾರ ಈಗಾಗಲೇ ಎರಡನೇ ಹಂತದ ಪ್ಯಾಕೇಜ್ ಘೋಷಿಸಿದ್ದು, ಮೊದಲ ಹಂತದ ಯೋಜನೆಗೆ ಅರ್ಜಿ ಸಲ್ಲಿಕೆಗೆ ಸಾಫ್ಟವೇರ್ ತಯಾರಿಕೆ ಇನ್ನೂ ಪೂರ್ಣಗೊಂಡಿಲ್ಲ. ಸಂಕಷ್ಟದಲ್ಲಿರುವವರಿಗೆ ಬೇಗ ಪರಿಹಾರ ಹಣ ನೀಡಿದರೆ ಅನುಕೂಲವಾಗುತ್ತದೆ.-
ರಾಮಣ್ಣ ವಡ್ರಟ್ಟಿ, ಟ್ಯಾಕ್ಸಿ ಚಾಲಕ.
-ಕೆ.ನಿಂಗಜ್ಜ