ಚಿತ್ರದುರ್ಗ: ಲಾಕ್‌ಡೌನ್ ಘೋಷಣೆಯಾದ ನಂತರ ದೇಶದ ಬೇರೆ ಬೇರೆ ಭಾಗಗಳಲ್ಲಿ ಸಿಲುಕಿದ್ದವರು ಈಗ ಮರಳಿ ಊರು ಸೇರಲು ತವಕಿಸುತ್ತಿದ್ದಾರೆ. ಉದ್ಯೋಗ, ವ್ಯವಹಾರ ಮತ್ತಿತರೆ ಕಾರಣಗಳಿಗೆ ದೇಶದ ವಿವಿಧ ರಾಜ್ಯಗಳಿಗೆ ತೆರಳಿದ್ದವರಿಗೆ ಈಗ ಅಂತಾರಾಜ್ಯ ಮಟ್ಟದಲ್ಲಿ ಸರ್ಕಾರ ಪಾಸ್ ನೀಡುತ್ತಿದ್ದು, ಈ ಪಾಸ್ ಮೂಲಕ ತಮ್ಮ ಊರು ಸೇರಲು ದಿನವೂ ಅರ್ಜಿ ಸಲ್ಲಿಕೆಯಾಗುತ್ತಿವೆ.
ಮೇ 1 ರಿಂದ ರಾಜ್ಯ ಸರ್ಕಾರ ಸೇವಾಸಿಂಧು ಪಾಸ್ ವ್ಯವಸ್ಥೆ ಜಾರಿಗೊಳಿಸಿದ್ದು, ಅಂದಿನಿಂದ ಇಲ್ಲಿಯವರೆಗೆ ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದಂತೆ 518 ಜನ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ 487 ಜನರಿಗೆ ಪ್ರಯಾಣಿಸಲು ಒಪ್ಪಿಗೆ ದೊರೆತಿದ್ದು, ಇನ್ನೂ 29 ಅರ್ಜಿಗಳು ಪ್ರಗತಿಯಲ್ಲಿವೆ.
ಹೊರ ರಾಜ್ಯಗಳಾದ ಗುಜರಾತ್, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಕೇರಳಾ, ಮಧ್ಯಪ್ರದೇಶಗಳಿಂದ ಹೆಚ್ಚು ಅರ್ಜಿಗಳು ನೊಂದಣಿಯಾಗಿವೆ. ಈ ಎಲ್ಲಾ ಅರ್ಜಿಗಳನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿ ಒಪ್ಪಿಗೆ ನೀಡುತ್ತಿದ್ದಾರೆ. ಆಯಾ ತಾಲೂಕು ವ್ಯಾಪ್ತಿಯ ಚೆಕ್‌ಪೋಸ್ಟ್‌ಗಳಲ್ಲಿ ಹೀಗೆ ಹೊರ ರಾಜ್ಯಗಳಿಂದ ಬಂದವರನ್ನು ತಡೆದು ಆರೋಗ್ಯ ಪರಿಶೀಲಿಸಿ ಅಲ್ಲಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ.
ಹೊರ ಜಿಲ್ಲೆಗಳಿಂದಲೂ ಬರುತ್ತಿದ್ದಾರೆ: ಜಿಲ್ಲೆಯ ಎಲ್ಲಾ ಗಡಿ ಭಾಗಗಳಲ್ಲಿ ಚೆಕ್‌ಪೋಸ್ಟ್ ಮಾಡಿ ಹೊರಗಿನಿಂದ ಬರುವವರ ಮೇಲೆ ಹದ್ದಿನ ಕಣ್ಣಿಟ್ಟು ಕಾಯಲಾಗುತ್ತಿದೆ. ಹೀಗೆ ಬಂದವರ ಆರೋಗ್ಯ ತಪಾಸಣೆ ಮಾಡಿ ಕ್ವಾರಂಟೆ„ನ್ ಮಾಡಲಾಗುತ್ತಿದೆ. ಈ ನಡುವೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದಲೂ ಪಾಸ್ ಪಡೆದು ಬರುತ್ತಿದ್ದಾರೆ. ಇನ್ನೂ ಕೆಲವರು ಅಲ್ಲಿ ಇಲ್ಲಿ ಕಳ್ಳದಾರಿ ಮೂಲಕವೂ ಬಂದು ಮನೆ ಸೇರುತ್ತಿದ್ದಾರೆ.
ಹೀಗೆ ಬಂದವರನ್ನು ಅಕ್ಕಪಕ್ಕದವರು ಗುರುತಿಸಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುತ್ತಿದ್ದಾರೆ. ಒಂದು ಕಡೆ ಮನೆಯಿಂದ ದೂರದಲ್ಲಿ ಬಂಧಿಯಾಗಿದ್ದವರು ಮನೆ ಸೇರಿದ ನೆಮ್ಮದಿ ಮನೆಯವರಿಗೆ ಸಿಕ್ಕಿ ನಿಟ್ಟುಸಿರು ಬಿಡುತ್ತಿದ್ದಾರೆ. ಆದರೆ ಈ ನಡುವೆ ಹೊರಗಿನಿಂದ ಬಂದವರೇ ಎಲ್ಲಿ ಕೊರೊನಾ ತಂದು ಹರಡುತ್ತಾರೋ ಎಂಬ ಆತಂಕವೂ ಕಾಡುತ್ತಿದೆ. ದೂರದ ಚೀನಾದಿಂದ ದುರ್ಗದವರೆಗೆ ಬಂದು ಕುಳಿತಿರುವ ವೈರಸ್ ಯಾವಾಗ ಎಲ್ಲಿ ಕಾಣಿಸಿಕೊಳ್ಳುತ್ತದೋ ಎನ್ನುವ ಭಯವಿದೆ.
ಈಗಾಗಲೇ ಗುಜರಾತಿನಿಂದ ಬಂದ ತಬ್ಲೀಘಿ ಸದಸ್ಯರು ಜಿಲ್ಲೆಗೆ ಕೋವಿಡ್ ವಾಹಕರಾಗಿ ಬಂದಿದ್ದಾರೆ. ಇದರಿಂದ ಹಸಿರು ವಲಯದಲ್ಲಿದ್ದ ಜಿಲ್ಲೆಯಲ್ಲಿ ಆತಂಕ ಸೃಷ್ಟಿಯಾಗಿದೆ. ಒಂದೇ ಸಮಾಧಾನ ಎಂದರೆ ಜಿಲ್ಲಾಡಳಿತ ತಕ್ಷಣ ಎಚ್ಚೆತ್ತು ಅವರನ್ನು ಕುಟುಂಬದವರೊಟ್ಟಿಗೆ ಸೇರಿಸದೆ ಕ್ವಾರಂಟೈನ್ ಮಾಡಿದ್ದು. ಜಿಲ್ಲೆಯಲ್ಲಿ ಇನ್ನಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಲ್ಲಿ ಕೋವಿಡ್ ಗೆ ತಡೆಯೊಡ್ಡಬಹುದಾಗಿದೆ.