Advertisement

ಮಕ್ಕಳ ವನ ನಿರ್ಮಾಣಕ್ಕೆ ಮುಂದಾದ ಗ್ರಾಮೀಣ ವಿದ್ಯಾಸಂಸ್ಥೆ

10:11 PM Aug 19, 2019 | Sriram |

ತೆಕ್ಕಟ್ಟೆ: ತಂತ್ರಜ್ಞಾನದ ಹಾದಿಯಲ್ಲಿ ದೂರವಾಗುತ್ತಿರುವ ನಿಸರ್ಗದ ನಡುವಿನ ಸಂಬಂಧ ಈ ನಡುವೆ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಸೇವಾ ಸಂಗಮ ವಿದ್ಯಾಕೇಂದ್ರದ ಪರಿಸರದಲ್ಲಿ 500 ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪೋಷಕರು ಹಣ್ಣಿನ ಗಿಡ ನೆಟ್ಟು ನಿಸರ್ಗ ಜಾಗೃತಿ ಮೂಡಿಸಿದರು.

Advertisement

500ಕ್ಕೂ ಅಧಿಕ ಹಣ್ಣಿನ ಗಿಡ
ಈ ಹಿಂದೆ ಕೆಂಪು ಕಲ್ಲು ಕಡಿಯುತ್ತಿದ್ದ ಗಟ್ಟಿಯಾದ ಸುಮಾರು 3 ಎಕರೆ ವಿಸ್ತೀರ್ಣದ ಜಾಗದಲ್ಲಿ ವಿವಿಧ ಬಗೆಯ ದೇಶ ವಿದೇಶದ ಸುಮಾರು 500ಕ್ಕೂ ಅಧಿಕ ಗಿಡಗಳು ಶಾಲಾ ಆಡಳಿತ ಮಂಡಳಿಯ ಮಾರ್ಗದರ್ಶನದಂತೆ ಗ್ರಾಮೀಣ ಭಾಗದ ಕನ್ನಡ ಶಾಲೆಯಲ್ಲಿ ಅನಾವರಣಗೊಂಡಿದೆ.

ಸಾಕಾರಗೊಂಡ ಕನಸು
ಶಾಲಾ ಸಂಚಾಲಕ ಉದ್ಯಮಿ ರಮೇಶ್‌ ನಾಯಕ್‌ ತೆಕ್ಕಟ್ಟೆ ಅವರು ಹಲವು ಸಾಮಾಜಿಕ ಕಾರ್ಯದಲ್ಲಿಯೇ ತನ್ನನ್ನು ತಾನು ತೊಡಗಿಸಿಕೊಂಡವರು. ಈ ನಡುವೆ ತೆಕ್ಕಟ್ಟೆ ಸೇವಾ ಸಂಗಮ ವಿದ್ಯಾ ಕೇಂದ್ರದ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಶಾಲಾ ಪರಿಸರವನ್ನು ಸಂಪೂರ್ಣ ಹಸಿರುಮಯಗೊಳಿಸಬೇಕು ಎನ್ನುವ ಹಂಬಲ. ಶಾಲಾ ಪರಿಸರದಲ್ಲಿನ ಕೆಂಪು ಕಲ್ಲು ಕಡಿಯುತ್ತಿದ್ದ ಗಟ್ಟಿಯಾದ ಖಾಲಿ ಇರುವ ಜಾಗದಲ್ಲಿ ಏನಾದರೂ ಹಣ್ಣಿನ ತೋಟ ಮಾಡಿ ಮುಂದಿನ ತಲೆಮಾರಿಗೆ ಅನುಕೂಲಕರ ವಾತಾವರಣ ಕಲ್ಪಿಸಬೇಕು ಎನ್ನುವ ನಿಟ್ಟಿನಿಂದ ಸಂಬಂಧಪಟ್ಟ ತೋಟಗಾರಿಕೆ ಇಲಾಖೆಯಲ್ಲಿನ ತಜ್ಞ ವಿಜ್ಞಾನಿಗಳನ್ನು ಕರೆಸಿ, ಈ ಪರಿಸರದ ಮಣ್ಣಿಗೆ ಹೊಂದಿಕೊಳ್ಳುವ ಹಣ್ಣಿನ ಗಿಡ ಹಾಗೂ ಅದಕ್ಕೆ ಪೂರಕವಾಗಿ ಬೇಕಾದ ಗೊಬ್ಬರ ಮೂರು ಅಡಿ ಹೊಂಡ ತೆಗೆದು ಮಕ್ಕಳ ಹಣ್ಣಿನ ತೋಟದ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದಾರೆ.

ಇಂಗುಗುಂಡಿ ನಿರ್ಮಾಣ
ಎಪ್ರಿಲ್‌ ಮೇ ತಿಂಗಳಲ್ಲಿ ಈ ಭಾಗದಲ್ಲಿ ನೀರಿನ ಅಭಾವ ಹೆಚ್ಚಾಗುತ್ತದೆ. ಪರಿಣಾಮ ಮಳೆಗಾಲದ ಆರಂಭಕ್ಕೂ ಮುನ್ನ ಮಕ್ಕಳ ಹಣ್ಣಿನ ತೋಟ ನಿರ್ಮಿಸಲು ಮೀಸಲಿರಿಸಿದ ಜಾಗದಲ್ಲೇ ವೈಜ್ಞಾನಿಕವಾಗಿ ಹೊಂಡ ತೆಗೆಯಲಾಗಿದ್ದು, ಪರಿಸರ ಸ್ನೇಹಿ ಮಳೆ ನೀರು ಇಂಗಿಸುವ ಮಹತ್ವದ ಕಾರ್ಯಕ್ಕೂ ಮುಂದಾಗಿ ಮಾದರಿಯಾಗಿದ್ದಾರೆ.

ದೇಶಿ ಹಾಗೂ ವಿದೇಶಿ ತಳಿಗಳು
ಸಿಹಿ ಹುಣಸೆ, ಹನುಮಾನ್‌ ಫಲ, ಗೋಲ್ಡನ್‌ ಸೀತಾಫಲ, ಹಸಿರು ಜಂಬು ನೇರಳೆ, ಪಿಂಕ್‌ ಜಂಬು ನೇರಳೆ, ರೆಡ್‌ ಜಂಬು ನೇರಳೆ, ರೆಡ್‌ ಪೇರಳೆ, ಕೆ.ಜಿ.ಪೇರಳೆ, ವೆಂಗೇ ಟೆಡ್‌ ಪೇರಳೆ, ಶೇಡ್‌ ಚೆರ್ರಿ, ಬಾಬುìಡಾನ್‌ ಚೆರ್ರಿ, ಬೇಕರಿ ಚೆರ್ರಿ, ಬ್ರಿಟಿಷ್‌ ಚೆರ್ರಿ, ರೊಲಿನಾ, ಬರಾಬ, ಮೂಟಿ ಫ್ರುಟ್‌, ಮಲ್‌ ಬೆರ್ರಿ, ಬನಾನ ಚಿಕ್ಕು, ಜಂಬೂ ಫಲ, ರುದ್ರಾಕ್ಷಿ, ಕರ್ಪೂರ, ಲಾಂಗ್‌ ಲೆಮನ್‌, ಬಿಳಿ ನೇರಳೆ, ಮ್ಯಾಂಗೋಸ್ಟಿನ್‌, ಸಿಹಿ ಅಮಟೆ, ಲುವಿ ಲುವಿ, ಲಕೋಟೆ, ಜಮೈಕನ್‌ ಚೆರ್ರಿ, ವೆರಿಗೇ ಟೆಡ್‌ ಚಿಕ್ಕು, ಚೈನೀಸ್‌ ಮುಸುಂಬಿ, ಅಂಜೂರ, ಸಲಾಡ್‌ ಆರೆಂಜ್‌, ಐಸ್‌ಕ್ರೀಮ್‌ ಬೀನ್‌, ಮಾಪರಂಗ್‌, ಡ್ರಾಗನ್‌ ಫ್ರುಟ್‌, ಚೀಲ, ಖರ್ಜೂರ, ಅಪ್ರಿಕೋಟ್‌, ಗ್ಯಾಬೆ ಫ್ರುಟ್‌, ಮಿಲ್ಕಿ ಫ್ರುಟ್‌, ಲಾಂಗಾನ್‌, ಲಾಂಗ್‌ ಸಾಟ್‌, ಜಬೋಟಿಕಾಬ, ಕೆಪೆಲ್‌, ಅಭಿಯು, ಸಾಂಟಾಲ್‌, ಡುರಿಯನ್‌, ಸಲಾಕ, ಲಿಚಿ, ಎಲಿಫೆಂಟ್‌ ಆ್ಯಪಲ್‌, ಮಲಬಾಲ್‌ ಚೆಸ್ಟ್‌ನೆಟ್‌ ಟ್ರಿ, ಸ್ವೀಟ್‌ ಕೋಕಂ, ಅಚಾಚ, ಮಕಡಮಿಯಾ ನಟ್‌, ಬುದ್ಧಾಸ್‌ ಹ್ಯಾಂಡ್‌ ಲೈಮ್‌, ನಟಾಲ್‌ ಪ್ಲಮ್‌, ಸಿಹಿ ಕರಂಡೆ, ಲೈಮ್‌ ಬೆರ್ರಿ, ಸಿಹಿ ಅಕರೊಲು ಚೆರ್ರಿ, ಮುಡ್ರೋನೊ, ಬರ್ಮಿಸ್‌ ಟ್ರೀಗ್ರೇಪ್‌, ಕುಂಟಾಲ ಹಣ್ಣು, ಬ್ಲ್ಯಾಕ್‌ ಬೆರ್ರಿ, ಹೈಬ್ರಿಡ್‌ ಬಿಗ್ನಾಯ್‌, ಅಗರವುಡ್‌, ಪೊನ್ನೇರಳೆ, ವೈಟ್‌ ಸಪೋಟ, ಪ್ಲಮ್‌, ಪುಲಾಸನ್‌, ಚಂಪಡಕ, ವಾಂಟೆ ಹುಳಿ ಇತ್ಯಾದಿ ದೇಶಿ ಹಾಗೂ ವಿದೇಶಿ ತಳಿಗಳ ಹಣ್ಣಿನ ಗಿಡ ನೆಡಲಾಗಿದೆ.

Advertisement

ಜಾಗರತರಾಗಬೇಕು
ನಾವುಎಲ್ಲಿ ನಿಂತಿದ್ದೇವೆ ಎನ್ನುವ ವಿಚಾರವನ್ನು ಮೊದಲು ಯೋಚನೆ ಮಾಡುವುದಾದರೆ, ಕರಾವಳಿಯಲ್ಲಿ ಪ್ರತಿ ವರ್ಷ ಮೂರುವರೆ ಸಾವಿರದಿಂದ ಸುಮಾರು ನಾಲ್ಕೂವರೆ ಸಾವಿರ ಮಿ.ಲೀ ನಷ್ಟು ಮಳೆ ಬರುತ್ತಿರುವುದು ಶತಃಶುದ್ಧ. ಹಾಗೂ ಇದಕ್ಕೆ ದಾಖಲೆ ಇದೆ .ಆದರೆ ಬದಲಾದ ಕಾಲದಲ್ಲಿ ಕರಾವಳಿಯಲ್ಲಿ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿಗೆ ಬಂದು ತಲುಪಿರುವುದು ಆತಂಕಕಾರಿ ವಿಚಾರ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮಳೆ ನೀರು ಇಂಗಬೇಕಾದ ಕೆರೆಗಳು ಮಾಯವಾಗಿ ಅಪಾರ್ಟ್‌ಮೆಂಟ್‌ಗಳು ಬಂದು ನಿಂತಿವೆ .ಈ ನಿಟ್ಟಿನಲ್ಲಿ ನಮ್ಮ ಪರಿಸರದಲ್ಲಿರುವ ಮರಗಿಡಗಳನ್ನು ಉಳಿಸಿ ಬೆಳಸುವ ಬಗ್ಗೆ ಶಿಕ್ಷಣದ ಜತೆಗೆ ಮೊದಲು ನಾವು ಜಾಗೃತರಾಗಬೇಕಾಗಿದೆ.
-ಡಾ| ಎಚ್‌. ಲಕ್ಷ್ಮೀಕಾಂತ,
ಜಿಲ್ಲಾ ಪರಿಸರ ಅಧಿಕಾರಿಗಳು

ಪೈಪ್‌ಲೈನ್‌ ಅಳವಡಿಕೆ
ಕಳೆದ ಹಲವು ವರ್ಷಗಳಿಂದಲೂ ಶಾಲಾ ಪರಿಸರದ ಪ್ರಕೃತಿಯ ಮಡಿಲಲ್ಲಿ ಮಕ್ಕಳ ವನ ನಿರ್ಮಿಸಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಹಂಬಲಕ್ಕೆ ಪೂರಕವಾಗಿ ಎಲ್ಲರ ಸಹಕಾರ ದೊರೆತಿದೆ. ಸುಮಾರು 3 ಎಕರೆ ವಿಸ್ತೀರ್ಣ ಜಾಗದಲ್ಲಿ 500 ಹಣ್ಣಿನ ಗಿಡ ನೆಡಲಾಗಿದ್ದು ಅದರಲ್ಲಿ 260 ಗಿಡಗಳು ಚಿಗುರಿದೆ. ಗಿಡಗಳ ಆರೈಕೆ ಮಾಡುವ ನಿಟ್ಟಿನಿಂದ ಪ್ರತಿ ಗಿಡಗಳಿಗೆ ದಿನಕ್ಕೆ 4 ಲೀಟರ್‌ ನೀರು ಪೂರೈಕೆ ಮಾಡುವ ಸಲುವಾಗಿ ಪೈಪ್‌ ಲೈನ್‌ ಅಳವಡಿಸಲಾಗಿದೆ.
– ಟಿ.ರಮೇಶ್‌ ನಾಯಕ್‌ ತೆಕ್ಕಟ್ಟೆ ,
ಸಂಚಾಲಕರು, ಸೇವಾ ಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next