Advertisement

ಕಳ್ಳರಿಗೆ ಸಿಗುವ ಮರ್ಯಾದೆ ಸಂತರಿಗೂ ಸಿಗಲ್ಲ!

05:50 PM Feb 08, 2021 | Team Udayavani |

ಬಾಗಲಕೋಟೆ: ಆದಾಯ ತೆರಿಗೆಯಲ್ಲಿ ಉನ್ನತ ಹುದ್ದೆಯ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದೇನೆ. ಉದ್ಯಮಿ ವಿಜಯ ಮಲ್ಯ ಅವರ ಪ್ರಕರಣ ಕೂಡ ಆಗ ಬಂದಿತ್ತು. ಸರ್ಕಾರಿ ಕಚೇರಿಗಳಲ್ಲಿ ಕಳ್ಳರಿಗೆ ರಾಜ  ಮರ್ಯಾದೆ ಇದೆ. ಅದನ್ನು ನೋಡಿ ಅಚ್ಚರಿಯಾಗಿತ್ತು. ಅಂತಹ ಕಳ್ಳರಿಗೆ ಸಿಗುವ ಮರ್ಯಾದೆ ಸಂತರಿಗೂ ಸಿಗುವುದಿಲ್ಲ ಎಂಬ ನೋವು ಇದೆ. ಕಳ್ಳರೊಂದಿಗೆ ಶಾಮಿಲಾಗಿ ಬದುಕಿನಲ್ಲಿ ಸಂತೋಷ, ನೆಮ್ಮದಿ ಬಯಸಿದರೆ ಸಿಗಲು ಸಾಧ್ಯವಿಲ್ಲ ಎಂದು ನಟ, ನಿರ್ದೇಶಕ ಎಸ್‌.ಎನ್‌. ಸೇತುರಾಮ ಹೇಳಿದರು.

Advertisement

ನಗರದ ಬಿವಿವಿ ಸಂಘದ ಮಿನಿ ಸಭಾ ಭವನದಲ್ಲಿ ಬಾಗಲಕೋಟೆ ಗೆಳೆಯರ ಬಳಗದಿಂದ ರವಿವಾರ ಹಮ್ಮಿಕೊಂಡಿದ್ದ ಎಂಥಾ ಚಂದದ ಬದುಕು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಹಂಕಾರ ಬಂದ್ರೆ ಪ್ರಪಂಚ ಚಿಕ್ಕದು: ಮನುಷ್ಯ ಯಾವುದೋ ಭ್ರಮೆ ಇಟ್ಟುಕೊಂಡು ಬದುಕು ನಡೆಸಿದರೆ, ಯಶಸ್ಸು ಸಾಧ್ಯವಿಲ್ಲ. ವಾಸ್ತವದಲ್ಲಿ ಬದುಕಬೇಕು. ಯಾವುದೇ ಜವಾಬ್ದಾರಿ, ಕರ್ತವ್ಯìದಿಂದ ನುಣುಚಿಕೊಳ್ಳಬಾರದು. ಇಡೀ ಜೀವನವನ್ನೇ ಆಸ್ತಿ ಸಂಪಾದಿಸಲು ಮೀಸಲಿಡುತ್ತಿದ್ದೇವೆ. ಹೀಗಾಗಿ  ಚಂದದ ಬದುಕು ಸಾಧ್ಯವಿಲ್ಲ. ಸಾಹಿತ್ಯ, ನಾಟಕ, ಸಂಗೀತದ ಒಡನಾಟ ಪ್ರತಿಯೊಬ್ಬರೂ  ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ನಮಗೆ ಯಾವಾಗ ಅಹಂಕಾರ ಬರುತ್ತದೆಯೋ ಆಗ ಪ್ರಪಂಚ ಇಷ್ಟೇ ಎಂಬ ಭಾವನೆ ಬರುತ್ತದೆ. ಅಹಂಕಾರ ಬರದಂತೆ ನಾವೆಲ್ಲ ಎಚ್ಚರದಿಂದ ಇರಬೇಕು. ಸಿಕ್ಕ ಅವಕಾಶಗಳನ್ನೇ ಬಳಸಿಕೊಂಡರೆ  ಬದುಕು ಸುಂದರವಾಗಲ್ಲ. ನಮಗೆ ಸರಿ ಕಾಣದ ಅವಕಾಶಗಳನ್ನು  ಧಿಕ್ಕರಿಸಿ, ಉತ್ತಮ ಅವಕಾಶ ಪಡೆಯುವುದರಲ್ಲಿ ತೃಪ್ತಿ ಕಾಣಬೇಕು. ಯಾವುದೇ ಕರ್ತವ್ಯವಿದ್ದರೂ ಪ್ರೀತಿಸಿ, ಗೌರವಿಸಬೇಕು ಎಂದು ತಿಳಿಸಿದರು.

ಮಠಾಧೀಶರಿಂದಲೂ ರಾಜಕೀಯ: ಇಂದು ಮಠಾಧೀಶರೂ ರಾಜಕೀಯ ಮಾಡುತ್ತಿದ್ದಾರೆ. ಮಠ-ಮಾನ್ಯರಿಗೆ ವೈರಾಗ್ಯ ಇರಬೇಕು. ಆದರೆ, ಇಂದು ಮಠಾಧೀಶರೂ ರಾಜಕೀಯ, ಪ್ರಾಪಂಚಿಕ ಜಂಜಾಟದಲ್ಲಿದ್ದಾರೆ. ಪಾದಪೂಜೆಗೆ ಕಳ್ಳರಿಗೆ ಅವಕಾಶ ಕೊಡುತ್ತಾರೆ. ಭಕ್ತರಿಗೆ ವೈರಾಗ್ಯದ ಭೋದನೆ ಮಾಡಿ, ತಾವು ಐಶಾರಾಮಿ ಜೀವನ ಬದುಸುತ್ತಾರೆ ಎಂದರು.

Advertisement

ಮಠ-ಮಾನ್ಯರಿಗೆ ಆಸೆ, ಕನಸು ಸಾಮಾನ್ಯ ಜನರಿಗೆ ಇರುವಂತೆ ಇವೆ. ಅವರಲ್ಲಿ ಅಧರ್ಮದ ಬಗ್ಗೆ ಚಿಂತನೆ ಇಲ್ಲ. ಮಠಗಳಿಗೆ ಬರುತ್ತಿರುವ ಆದಾಯ, ವ್ಯವಹಾರ, ಅವರು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಿಂದ ಲಾಭದ ಬಗ್ಗೆಯೇ ಅವರೂ ಒತ್ತಡದ ಬದುಕಿಗೆ ಒಳಗಾಗುತ್ತಾರೆ. ಅದಕ್ಕಾಗಿ ರಾಜಕೀಯ ಮಾಡುತ್ತಾರೆ. ಇದೆಲ್ಲದರ ಪರಿಣಾಮ ಅವರಿಗೂ ಸಕ್ಕರೆ ಕಾಯಿಲೆ, ರಕ್ತದೊತ್ತಡದಂತಹ ಕಾಯಿಲೆ ಆವರಿಸಿಕೊಳ್ಳುತ್ತಿವೆ ಎಂದು ಮಾರ್ಮಿಕವಾಗಿ ನುಡಿದರು.

ಸಂಬಂಧಿಗಳ ಸಾಧನೆಗೆ ಸಂಭ್ರಮಿಸಬೇಕು: ನಾವು  ಯಾವುದೇ ಗಣ್ಯ ವ್ಯಕ್ತಿ, ಉದ್ಯಮಿಗಳು, ಚಿತ್ರ ತಾರೆಯವರು ಮದುವೆ ಇಲ್ಲವೇ ಸ್ವಂತಕ್ಕೆ ಸುಂದರ ಮನೆ ಕಟ್ಟಿಕೊಂಡರೆ ಖುಷಿ-ಸಂತೋಷ ಪಡುತ್ತೇವೆ.ಆದರೆ, ನಮ್ಮ ಸಹೋದರ-ಸಹೋದರಿಯರು, ಸಂಬಂಧಿಕರು ಇಂತಹ ಯಾವುದೇ ಸಾಧನೆ-ಸಂಭ್ರಮ ಮಾಡಿದರೂ, ಸಹಿಸಿಕೊಳ್ಳುವ ಗುಣ ಬೆಳೆಸಿಕೊಂಡಿಲ್ಲ. ಅವರ ಸಂಭ್ರಮದಲ್ಲೂ ನಾವು ಭಾಗಿಯಾಗದೇ ಹೊಟ್ಟೆಕಿಚ್ಚು ಪಡುವ ಸ್ವಭಾವ ಬೇರೂರಿಬಿಟ್ಟಿದೆ. ಬದುಕಿದ್ದಾಗ ಅವರೊಂದಿಗೆ ಜಗಳ ಮಾಡುತ್ತೇವೆ, ಸತ್ತಾಗ ಅವರ ಹೆಸರಿನಲ್ಲಿ ಸಂತಾಪ ಸಭೆ ಮಾಡುತ್ತೇವೆ. ಅವರೊಂದಿಗೆ ಜಗಳವಾಡಲು ಕಾರಣ ಹುಡುಕಲು ಪ್ರಯತ್ನಿಸುವುದಿಲ್ಲ. ಬದುಕು ಸುಂದರ ಮಾಡಿಕೊಳ್ಳಲು ಮುಂದಾಗುವುದಿಲ್ಲ ಎಂದು ಹೇಳಿದರು.

ಸೇವೆಗಿಂತ ಗಳಿಕೆಗೆ ಸಮಯ: ಇಂದು ದೇಶದ ವ್ಯವಸ್ಥೆ ಮಧ್ಯವರ್ತಿಗಳಿಂದ ಹಾಳಾಗಿದೆ. ಬಹುತೇಕ  ಸರ್ಕಾರಿ ಕಚೇರಿಗಳ ಅಧಿಕಾರಿಗಳು ತಮ್ಮ ಕರ್ತವ್ಯ, ಸೇವೆಗಿಂತ ಆದಾಯ ಗಳಿಕೆಗೆ ಹೆಚ್ಚು ಸಮಯ ಮೀಸಲಿಡುತ್ತಾರೆ. ನಂಬಿಕೆ, ವಿಶ್ವಾಸ, ಪ್ರಾಮಾಣಿಕ ಮಾರಾಟವಾಗುತ್ತಿದೆ ಎಂದು ತಿಳಿಸಿದರು.

ಮಹಾವೀರ, ಬುದ್ಧರಂತಹ ವ್ಯಕ್ತಿಗಳು ಇಲ್ಲಿ ಜನಿಸಿದ್ದಾರೆ. ಅವರೆಲ್ಲ ಬದುಕು ಹೇಗಿರಬೇಕು ಎಂಬುದನ್ನು ವಿಶ್ವಕ್ಕೆ ಅರಿವು ಮೂಡಿಸಿದ್ದಾರೆ. ಮನುಷ್ಯರಿಗೆ ಜ್ಞಾನ, ವಿಜ್ಞಾನ ನಾಗರಿಕತೆಯಿಂದ ಬರುವುದಿಲ್ಲ. ನಾವು ಜೀವಿಸುವ ಶೈಲಿಯಿಂದ ಬರುತ್ತದೆ. ಹೀಗಾಗಿ ಆರೋಗ್ಯವಂತ ಜೀವನ ದೊರೆತಿದೆ. ಅದರಿಂದಲೇ ಕೊರೊನಾದಂತಹ ಮಾರಿಯಿಂದ ರಕ್ಷಿಸಿಕೊಂಡಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ :ಮನಸಿದ್ದರೆ ಸಾಧನೆ ಸುಲಭ

ಕೊರೊನಾದಲ್ಲೂ ರಾಜಕೀಯ ಸಮಾವೇಶ: ದೇಶದಲ್ಲಿ ಹಲವಾರು ಧರ್ಮ, ಭಾಷೆ ಇವೆ. ವಿಶ್ವದ ಯಾವುದೇ ರಾಷ್ಟ್ರದಲ್ಲಿ ಇಲ್ಲದ ಸಂಗೀತ, ನಾಟಕ, ರಂಗಭೂಮಿ ನಮ್ಮಲ್ಲಿವೆ. ನಾವು ಎಂದೂ ಬೇರೆ ರಾಷ್ಟ್ರಗಳ ಮೇಲೆ ದಾಳಿ ಮಾಡಿದವರಲ್ಲ. ಹಳ್ಳಿಯ ಕಟ್ಟೆ, ಮನೆಯಲ್ಲಿ ಕುಳಿತು ನಮ್ಮ ದೇಶದ  ಅಭಿವೃದ್ಧಿ ಸೂಚಾಂಕ್ಯ (ಜಿಡಿಪಿ)ದ ಬಗ್ಗೆ ಮಾತನಾಡುತ್ತೇವೆ. ನಮ್ಮಿಂದಲೇ ಜಿಡಿಪಿ ಹೆಚ್ಚಬೇಕಿದೆ ಎಂಬ ಚಿಂತನೆ ನಾವು ಮಾಡುವುದಿಲ್ಲ. ಪ್ರತಿ ವಿಷಯದಲ್ಲೂ ರಾಜಕೀಯ ಮಾಡುವ ಮನೋಭಾವನೆ ಬೆಳೆಸಿಕೊಂಡಿದ್ದೇವೆ. ಕೊರೊನಾದಂತಹ ಮಹಾಮರಿ ಇದ್ದಾಗಲೂ ರಾಜಕೀಯ ಸಮಾವೇಶ, ಪ್ರತಿಭಟನೆ ನಡೆದಿವೆ. ಈ ರೀತಿ ವಿಶ್ವದ ಯಾವ ರಾಷ್ಟ್ರದಲ್ಲೂ ನಡೆಯಲಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next