Advertisement
ಲೋಕ್ ಅದಾಲತ್ ಹೊರತಾಗಿ ವ್ಯಾಜ್ಯ ಇತ್ಯರ್ಥದ ಇತರ ಪರ್ಯಾಯ ವಿಧಾನಗಳಾದ ಮಧ್ಯಸ್ಥಿಕೆ, ರಾಜಿ-ಸಂಧಾನ ಮೂಲಕ ತಮ್ಮ ವ್ಯಾಜ್ಯಗಳನ್ನು ಇತ್ಯರ್ಥ ಅಥವಾ ರಾಜಿ ಮಾಡಿಕೊಂಡರೆ ಅಂತಹ ಪ್ರಕರಣಗಳ ಉಭಯ ಕಕ್ಷಿದಾರರಿಗೆ ಪೂರ್ಣ ಪ್ರಮಾಣದ (ಶೇ.100) ಶುಲ್ಕ ಮರುಪಾತಿ ಮಾಡುವ ಬಗ್ಗೆ ಸುಪ್ರೀಂಕೋರ್ಟ್‌ನ ಶಿಫಾರಸುಗಳನ್ನು ಪರಿಗಣಿಸಿ, ರಾಜ್ಯದ ಕಾಯ್ದೆಯಡಿ ಶುಲ್ಕ ಮರುಪಾವತಿಗೆ ಅವಕಾಶ ಮಾಡಿಕೊಡಬೇಕೆಂದು ಆದೇಶದಲ್ಲಿ ಹೇಳಿರುವ ಹೈಕೋರ್ಟ್, ಇದರಿಂದ ವ್ಯಾಜ್ಯ ಪರಿಹಾರಗಳ ಪರ್ಯಾಯ ವಿಧಾನಗಳಿಗೆ ಉತ್ತೇಜನ ಸಿಗಲಿದೆ ಎಂದು ಆಶಯ ವ್ಯಕ್ತಪಡಿಸಿದೆ.
Related Articles
Advertisement
ಆದರೆ, ಹಲವು ರಾಜ್ಯಗಳಲ್ಲಿ ಇಂತಹ ಪ್ರಕರಣಗಳಲ್ಲಿ ಶೇ.100ರಷ್ಟು ಕೋರ್ಟ್ ಶುಲ್ಕ ಮರುಪಾವತಿಗೆ ಅವಕಾಶ ಮಾಡಿಕೊಡಲಾಗಿದೆ. ಸೇಲಂ ಬಾರ್ ಅಸೋಸಿಯೇಷನ್, ತಮಿಳುನಾಡು ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಶೇ.100 ಶುಲ್ಕ ಮರುಪಾವತಿಗೆ ಪೂರಕವಾಗಿ ಸ್ಥಳೀಯ ಕೋರ್ಟ್ ಶುಲ್ಕ ಕಾಯ್ದೆಗಳಲ್ಲಿ ತಿದ್ದುಪಡಿ ತರುವಂತೆ ಸುಪ್ರೀಂಕೋರ್ಟ್ ಎಲ್ಲ ರಾಜ್ಯಗಳಿಗೆ ಶಿಫಾರಸು ಮಾಡಿದೆ. ಆದರೆ, ಕರ್ನಾಟಕದಲ್ಲಿ ಈವರೆಗೆ ತಿದ್ದುಪಡಿ ಆಗಿಲ್ಲ.
ಈ ಮಧ್ಯೆ ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸೂಕ್ತ ತಿದ್ದುಪಡಿಗಳನ್ನು ತರಲಾಗಿದೆ. ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ಕೋರ್ಟ್ ಶುಲ್ಕ ಕಾಯ್ದೆಗೂ ಉತ್ತಮ ರೀತಿಯಲ್ಲಿ ತಿದ್ದುಪಡಿಗಳನ್ನು ತರಲಾಗಿದೆ. ಆದರೆ, ಸುಪ್ರೀಂಕೋರ್ಟ್‌ನ ನಿರ್ದೇಶನಕ್ಕೆ ಅನುಗುಣವಾಗಿ ಶೇ.100 ಶುಲ್ಕ ಮರುಪಾವತಿ ವಿಚಾರದಲ್ಲಿ ಕರ್ನಾಟಕ ರಾಜ್ಯದಲ್ಲಿ ಈವರೆಗೆ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಅರ್ಜಿದಾರರ ವಾದವನ್ನು ಹೈಕೋರ್ಟ್ ಪರಿಗಣಿಸಿದೆ.
ಏನಿದು ಶೇ.100 ಶುಲ್ಕ ಮರುಪಾವತಿ?: ವ್ಯಾಜ್ಯಗಳ ಇತ್ಯರ್ಥಕ್ಕೆ ಮಧ್ಯಸ್ಥಿಕೆ, ರಾಜಿ-ಸಂಧಾನ ಹಾಗೂ ಲೋಕ್ ಅದಾಲತ್ ಸೇರಿ ನಾಲ್ಕು ಪರ್ಯಾಯ ವ್ಯಾಜ್ಯ ಪರಿಹಾರ ವಿಧಾನಗಳಿವೆ. ಲೋಕ್ ಅದಾಲತ್‌ನಲ್ಲಿ ಇತ್ಯರ್ಥಗೊಳ್ಳುವ ವ್ಯಾಜ್ಯಗಳಿಗೆ “ಕೇಂದ್ರ ಕೋರ್ಟ್ ಶುಲ್ಕ ಕಾಯ್ದೆ’ ಅನ್ವಯವಾಗಲಿದ್ದು, ಶೇ.100 ಶುಲ್ಕ ಮರುಪಾವತಿಗೆ ಅವಕಾಶವಿದೆ. ಇದೇ ರೀತಿಯಲ್ಲಿ ಮಧ್ಯಸ್ಥಿಕೆ, ರಾಜಿ-ಸಂಧಾನ ವಿಧಾನಗಳ ಮೂಲಕ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಂಡರೆ ಶೇ.100 ಶುಲ್ಕ ಮರುಪಾವತಿಗೆ ಅವಕಾಶವಾಗುವಂತೆ ಆಯಾ ರಾಜ್ಯಗಳ ಕೋರ್ಟ್ ಶುಲ್ಕ ಕಾಯ್ದೆಗೆ ಅಗತ್ಯ ತಿದ್ದುಪಡಿ ತರುವಂತೆ ಸುಪ್ರೀಂಕೋರ್ಟ್ ಶಿಫಾರಸು ಮಾಡಿತ್ತು. ಇದನ್ನೇ ಆಧರಿಸಿ ವಕೀಲರೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದರು.
* ರಫೀಕ್ ಅಹ್ಮದ್