ಹೊಸದಿಲ್ಲಿ: ಅಯೋಧ್ಯೆ ರಾಮಮಂದಿರದ ಭೂಮಿಪೂಜೆ ಹಿನ್ನೆಲೆಯಲ್ಲಿ ಬಿಜೆಪಿಯ ಫೈರ್‌ಬ್ರ್ಯಾಂಡ್ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ, ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಬಹುದೊಡ್ಡ ಬೇಡಿಕೆ ಇಟ್ಟಿದ್ದಾರೆ. “ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ, ಮುರಳಿ ಮನೋಹರ ಜೋಶಿ ಮತ್ತಿತರರನ್ನು ಪ್ರಧಾನಿ ಮೋದಿ ಅಯೋಧ್ಯೆ ಭೂಮಿಪೂಜೆಗೆ ಕರೆದೊಯ್ಯುವ ಮೊದಲು ಅವರ ಮೇಲಿರುವ ಬಾಬ್ರಿ ಮಸೀದಿ ಧ್ವಂಸದ ಕ್ಷುಲ್ಲಕ ಪ್ರಕರಣವನ್ನು ಇತ್ಯರ್ಥಗೊಳಿಸಲು ಮುಂದಾಗಬೇಕು’ ಎಂದು ಟ್ವೀಟ್‌ನಲ್ಲಿ ಒತ್ತಾಯಿಸಿದ್ದಾರೆ. “ಅವರು ಮಸೀದಿಯನ್ನು ಕೆಡವಲಿಲ್ಲ. ರಾಮಮಂದಿರದ ಪುನರ್ ನಿರ್ಮಾಣಕ್ಕಾಗಿ ಮಸೀದಿ ಉರುಳಿಸಿದ್ದಾರಷ್ಟೇ’ ಎಂದು ಹೇಳಿದ್ದಾರೆ.
ಭಿನ್ನಮತವಿಲ್ಲ: ಆ.5ರ ಅಯೋಧ್ಯೆ ಭೂಮಿಪೂಜೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಿಎಂ ಉದ್ಧವ್ ಠಾಕ್ರೆ ನಿರ್ಧಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಸಮ್ಮಿಶ್ರ ಸರಕಾರದಲ್ಲಿ ಯಾವುದೇ ಭಿನ್ನಮತವಿಲ್ಲ ಎಂದು ಶಿವಸೇನೆ ಸ್ಪಷ್ಟಪಡಿಸಿದೆ.
ಉದ್ಧವ್ ಸಿಎಂ ಆಗುವುದಕ್ಕೆ ಮುಂಚೆಯೂ ಅಯೋಧ್ಯೆಗೆ ಹೋಗಿದ್ದರು. ಸಮ್ಮಿಶ್ರ ಸರಕಾರ 100 ದಿನ ಪೂರೈಸಿದಾಗಲೂ ಕಾಂಗ್ರೆಸ್ ಸಚಿವರೊಂದಿಗೆ ಶ್ರೀರಾಮನ ಜನ್ಮಭೂಮಿಗೆ ತೆರಳಿದ್ದರು. ರಾಮನ ಮೇಲಿನ ನಂಬಿಕೆ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.
ಸಿಎಂ ಉದ್ಧವ್ ಠಾಕ್ರೆ ರಾಮಮಂದಿರ ಭೂಮಿಪೂಜೆಯಂಥ ನಿರ್ದಿಷ್ಟ ಧರ್ಮದ ಚಟುವಟಿಕೆಯನ್ನು ಪ್ರೋತ್ಸಾಹಿಸಬಾರದು.
ಮಜೀದ್ ಮೆಮನ್, ಎನ್‌ಸಿಪಿ ಮುಖಂಡ