Advertisement

ಅನುದಾನ ತಡೆಹಿಡಿದಕ್ಕೆ ಅಭಿವೃದ್ಧಿಗೆ ಹಿನ್ನಡೆ

09:04 PM Dec 07, 2019 | Lakshmi GovindaRaj |

ತಿ.ನರಸೀಪುರ: ಕ್ಷೇತ್ರದ ಅಭಿವೃದ್ಧಿಗೆ ಬಿಡುಗಡೆಯಾಗಿದ್ದ 52 ಕೋಟಿ ರೂ.ಗಳ ಅನುದಾನವನ್ನು ಬಿಜೆಪಿ ಸರ್ಕಾರ ತಡೆ ಹಿಡಿದಿದ್ದರಿಂದ ಗ್ರಾಮಗಳ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು. ತಾಲೂಕಿನ ಡಣಾಯಕನಪುರ ಗ್ರಾಮದಲ್ಲಿ ಎಸ್‌ಡಿಪಿ ಯೋಜನೆಯಡಿ 45 ಲಕ್ಷ ರೂ.ಗಳ ವೆಚ್ಚದಲ್ಲಿ 4 ರಿಂದ 7 ಕಿ.ಮೀ ವರೆಗೆ ಹಮ್ಮಿಕೊಂಡಿರುವ ರಸ್ತೆ ಮರು ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

Advertisement

ಕ್ಷೇತ್ರದಲ್ಲಿ ಈ ವೇಳೆಗಾಗಲೇ ಅಭಿವೃದ್ಧಿ ಕಾಮಗಾರಿಗಳು ಮುಕ್ತಾಯ ಹಂತ ತಲುಪಬೇಕಿತ್ತು. ಆದರೆ ಬಿಡುಗಡೆಯಾಗಿದ್ದ ಅನುದಾನವನ್ನು ಬಿಜೆಪಿ ಸರ್ಕಾರ ತಡೆ ಹಿಡಿದ ಪರಿಣಾಮ ಸ್ವಲ್ಪ ಮಟ್ಟಿಗೆ ಸಮಸ್ಯೆ ಉಂಟಾಗಿತ್ತು. ಈಗ ಕಾಮಗಾರಿ ಬಿರುಸು ಪಡೆದಿದ್ದು ಗ್ರಾಮದಲ್ಲಿ ಶೇ.90 ಭಾಗ ಕಾಂಕ್ರೀಟ್‌ ರಸ್ತೆ ಹಾಗೂ ಚರಂಡಿ ಕಾಮಗಾರಿಗಳು ಮುಗಿದಿವೆ ಎಂದರು. ಮೂರು ವರ್ಷಗಳ ಹಿಂದೆ ಹಾಕಲಾಗಿದ್ದ ಡಾಂಬರಿನ ರಸ್ತೆಗೆ ಮರು ಡಾಂಬರೀಕರಣ ಮಾಡಲಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲು ಕ್ರಮ ಕೈಗೊಳ್ಳಲಾಗುತ್ತದೆ. ವ್ಯವಸಾಯ ಅವಲಂಭಿಸಿರುವ ಗ್ರಾಮಸ್ಥರ ಅನುಕೂಲಕ್ಕಾಗಿ ಕಾಲುವೆ ನೀರು ಸರಾಗವಾಗಿ ಹರಿದು ಜಮೀನು ತಲುಪುವ ವ್ಯವಸ್ಥೆ ಮಾಡಲಾಗುವುದು. ಈ ಕಾಮಗಾರಿಗೆ ಹೆಚ್ಚಿನ ಹಣ ಬೇಕಾಗಿರುವುದರಿಂದ ಶೀಘ್ರವಾಗಿ ಹಣ ಬಿಡುಗಡೆ ಮಾಡಿಸಿ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸಮರ್ಪಕ ಕಾಮಗಾರಿಗೆ ಕೈಗೊಳ್ಳುವಂತೆ ಸೂಚನೆ ನೀಡಲಾಗುವುದು ಎಂದರು.

ಗ್ರಾಮದಲ್ಲಿರುವ ಶಾಲೆಯ ಮುಖ್ಯಸ್ಥರು ಹೆಚ್ಚುವರಿ ಕೊಠಡಿಗೆ ಮನವಿ ಸಲ್ಲಿಸಿದ್ದು ಶೀಘ್ರ ಮಂಜೂರು ಮಾಡಿಸಲಾಗುವು ದೆಂದು ಭರವಸೆ ನೀಡಿದರು. ಕ್ಷೇತ್ರದ ಪ್ರತಿ ಗ್ರಾಮವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಬಾರದೆಂಬ ಹಿತದೃಷ್ಟಿಯಿಂದ ಎಲ್ಲಾ ಗ್ರಾಮಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನಮಾಡುತ್ತಿರುವುದಾಗಿ ತಿಳಿಸಿದರು. ಗ್ರಾಮಸ್ಥರು ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು.

ಸ್ಪಂದಿಸಿದ ಯತೀಂದ್ರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಗ್ರಾಪಂ ಸದಸ್ಯರಾದ ಸರೋಜಮ್ಮ, ರಾಜಪ್ಪ, ಪುರಸಭಾ ಸದಸ್ಯ ಸ್ವಾಮಿ, ಮುಖಂಡರಾದ ಪಿ.ಸ್ವಾಮಿನಾಥನ್‌, ಡಿ.ಸೋಮಣ್ಣ, ಸ್ವಾಮಿ ನಾಯಕ, ತಹಶೀಲ್ದಾರ್‌ ನಾಗೇಶ್‌, ತಾಪಂ ಕಾರ್ಯ ನಿರ್ವಹಣಾಧಿಕಾರಿ ಜೆರಾಲ್ಡ್‌ ರಾಜೇಶ್‌, ಎಇಇ ಕುಮಾರಸ್ವಾಮಿ, ಜೆಇ ಹೊನ್ನೇಗೌಡ, ಗುತ್ತಿಗೆದಾರ ಚೇತನ್‌ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next