ನವದೆಹಲಿ:ನಿಜವಾದ ಶಿವಸೇನೆ ಯಾರದ್ದು ಎಂಬುದನ್ನು ಭಾರತದ ಚುನಾವಣಾ ಆಯೋಗವೇ (ಇಸಿಐ) ನಿರ್ಧರಿಸಲಿದೆ ಎಂದು ಸುಪ್ರೀಂಕೋರ್ಟ್ ಮಂಗಳವಾರ ಆದೇಶ ಹೊರಡಿಸಿದೆ.
ನ್ಯಾ.ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಈ ಆದೇಶ ನೀಡಿದೆ. ಇದರಿಂದಾಗಿ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಣಕ್ಕೆ ಭಾರಿ ಹಿನ್ನಡೆಯಾಗಿದೆ.
ಮಹಾರಾಷ್ಟ್ರದಲ್ಲಿ ಸದ್ಯ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಬಣದಲ್ಲಿ ಹೆಚ್ಚಿನ ಶಾಸಕರು, ಸಂಸದರು ಇದ್ದಾರೆ. ಹೀಗಾಗಿ, ಶಿಂಧೆ ಅವರು ಶಿವಸೇನೆಯ ಚಿಹ್ನೆಯಾಗಿರುವ ಬಿಲ್ಲು ಮತ್ತು ಬಾಣ ನಮ್ಮ ಬಣಕ್ಕೇ ಸೇರಬೇಕು. ನಮ್ಮ ಬಣವನ್ನೇ ನಿಜವಾದ ಶಿವಸೇನೆ ಎಂದು ಘೋಷಣೆ ಮಾಡಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಅಂಥ ನಿರ್ಧಾರ ಕೈಗೊಳ್ಳದಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಬೇಕು ಎಂದು ಉದ್ಧವ್ ಠಾಕ್ರೆ ಬಣ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿತ್ತು.
ಬಾಂಬೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನಲ್ಲಿ ಅದರ ವಿಚಾರಣೆ ನಡೆದು, ಅಂತಿಮವಾಗಿ ಅದು ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆಗೊಂಡಿತ್ತು.
ನ್ಯಾ.ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ “ನಿಜವಾದ ಶಿವಸೇನೆ ಯಾರದ್ದು ಎಂದು ನಿರ್ಧರಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುತ್ತೇವೆ. ಜತೆಗೆ ಈ ಪ್ರಕ್ರಿಯೆಗೆ ಇದ್ದ ತಡೆಯಾಜ್ಞೆಯನ್ನು ತೆರವುಗೊಳಿಸುತ್ತೇವೆ’ ಎಂದು ಆದೇಶ ನೀಡಿತು.
ಶಿಂಧೆ ಸ್ವಾಗತ:
ಸುಪ್ರೀಂಕೋರ್ಟ್ ಆದೇಶವನ್ನು ಸಿಎಂ ಏಕನಾಥ ಶಿಂಧೆ ಸ್ವಾಗತಿಸಿ “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಮತ ಪ್ರಮುಖವಾದದ್ದು. ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಮಗೆ ಬಹುಮತ ಇದೆ. ಜತೆಗೆ ಲೋಕಸಭೆಯಲ್ಲೂ ನಮ್ಮ ಸಂಸದರೇ ಇದ್ದಾರೆ’ ಎಂದು ಹೇಳಿದ್ದಾರೆ.