ತಿರುವನಂತಪುರಂ: ಕೇರಳದ ತ್ರಿಕ್ಕಾಕರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ವಿರೋಧ ಪಕ್ಷವಾದ ಕಾಂಗ್ರೆಸ್ ಮತ್ತು ಯುಡಿಎಫ್ ಮೈತ್ರಿಕೂಟದ ಅಭ್ಯರ್ಥಿ ಭರ್ಜರಿ ಜಯ ಸಾಧಿಸುವ ಮೂಲಕ ಆಡಳಿತಾರೂಢ ಸಿಪಿಐ(ಎಂ) ನೇತೃತ್ವದ ಎಲ್ ಡಿಎಫ್ ಭಾರೀ ಮುಖಭಂಗ ಅನುಭವಿಸಿದೆ.
ಇದನ್ನೂ ಓದಿ:ಪಾಠವಿಲ್ಲ, ಊಟವೂ ಇಲ್ಲ: ಹುಣಸೂರಿನಲ್ಲಿ ಶಾಲೆಗೆ ಬೀಗ ಜಡಿದು ಪ್ರತಿಭಟನೆ
ಭಾರೀ ಪ್ರತಿಷ್ಠೆಯ ಕಣವಾಗಿದ್ದ ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮಾ ಥಾಮಸ್ 25,000ಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸಿದ್ದು, ಆಡಳಿತಾರೂಢ ಸಿಪಿಐಎಂನ ಅಭ್ಯರ್ಥಿ ಜೋ ಜೋಸೆಫ್ ಪರಾಜಯಗೊಂಡಿದ್ದಾರೆ.
ತ್ರಿಕ್ಕಾಕರ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಅಭ್ಯರ್ಥ ಪರವಾಗಿ ಭಾರೀ ಪ್ರಚಾರ ಕೈಗೊಂಡಿದ್ದರು. ಈ ಸೋಲು ಅನಿರೀಕ್ಷಿತ ಮತ್ತು ಆಘಾತಕಾರಿಯಾಗಿದೆ ಎಂದು ಪಿಣರಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಆಡಳಿತಾರೂಢ ಎಡಪಕ್ಷದ ಸೋಲು ಪಿಣರಾಯಿ ವಿಜಯನ್ ನೇತೃತ್ವದ ಎಲ್ ಡಿಎಫ್ ಸರ್ಕಾರ ಮತದಾರನ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ. ತ್ರಿಕ್ಕಾಕರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದಿವಂಗತ ಪಿಟಿ ಥಾಮಸ್ ಅವರ ಪತ್ನಿ ಉಮಾ ಥಾಮಸ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ಉಮಾ ಥಾಮಸ್ ಅವರು 72,000 ಮತಗಳನ್ನು ಪಡೆದು ಗೆಲುವಿನ ನಗು ಬೀರಿದ್ದು, ಸಮೀಪದ ಪ್ರತಿಸ್ಪರ್ಧಿ ಸಿಪಿಐಎಂನ ಜೋಸೆಫ್ 47,000 ಮತ ಪಡೆದು ಸೋಲನ್ನನುಭವಿಸಿದ್ದಾರೆ ಎಂದು ವರದಿ ತಿಳಿಸಿದೆ.
ಭಾರತೀಯ ಜನತಾ ಪಕ್ಷದ ಎ.ಎನ್ ರಾಧಾಕೃಷ್ಣನ್ ಮೂರನೇ ಸ್ಥಾನದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಸಿಎಂ ಪಿಣರಾಯಿ ಹಾಗೂ ಎಲ್ಲಾ ಸಚಿವರು, ಪಕ್ಷದ ಶಾಸಕರು ಮನೆ, ಮನೆಗೆ ಭೇಟಿ ನೀಡಿ ಪ್ರಚಾರ ಕೈಗೊಂಡಿದ್ದರು ಕೂಡಾ ಪಕ್ಷದ ಅಭ್ಯರ್ಥಿ ಪರಾಜಯಗೊಂಡಿರುವುದು ತೀವ್ರ ಮುಖಭಂಗಕ್ಕೆ ಎಡೆಮಾಡಿಕೊಟ್ಟಿರುವುದಾಗಿ ವರದಿ ವಿವರಿಸಿದೆ.