ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿ ತಮ್ಮ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಪ್ರಶ್ನಿಸಿ ದೆಹಲಿ ಮಾಜಿ ಸಿಎಂ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ(ಅ21) ವಜಾಗೊಳಿಸಿದೆ.
ಗುಜರಾತ್ ವಿವಿ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯು, ಸಾರ್ವಜನಿಕವಾಗಿ ಮತ್ತು ಪತ್ರಿಕಾಗೋಷ್ಠಿಗಳಲ್ಲಿ ಕೇಜ್ರಿವಾಲ್ ನೀಡಿದ ಹೇಳಿಕೆಗಳ ಕುರಿತಾಗಿದೆ. ಪ್ರಧಾನಿ ಮೋದಿಯವರ ಶೈಕ್ಷಣಿಕ ರುಜುವಾತುಗಳ ಸಿಂಧುತ್ವವನ್ನು, ನಿರ್ದಿಷ್ಟವಾಗಿ ಗುಜರಾತ್ ವಿಶ್ವವಿದ್ಯಾಲಯದಿಂದ ಪಡೆದ ಪದವಿಯನ್ನು ಕೇಜ್ರಿವಾಲ್ ಪ್ರಶ್ನಿಸಿದ್ದರು.
ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್.ವಿ.ಎನ್ ಭಟ್ಟಿ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ಕೇಜ್ರಿವಾಲ್ ಅವರ ಅರ್ಜಿಯನ್ನು ವಜಾಗೊಳಿಸಿದೆ.
ಟೀಕೆಗಳನ್ನು ಗುಜರಾತ್ ವಿವಿಯು ಅವಹೇಳನಕಾರಿ ಮತ್ತು ಪ್ರತಿಷ್ಠೆಗೆ ಹಾನಿಯುಂಟುಮಾಡಿದೆ ಎಂದು ವಿವಿಯ ರಿಜಿಸ್ಟ್ರಾರ್ ಪಿಯೂಷ್ ಪಟೇಲ್ ಅವರು ಕೇಜ್ರಿವಾಲ್ ಮತ್ತು ಆಪ್ ನಾಯಕ ಸಂಜಯ್ ಸಿಂಗ್ ರ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಕೇಜ್ರಿವಾಲ್ ಬೇಡಿಕೆಗೆ ಪ್ರತಿಕ್ರಿಯೆಯಾಗಿ ಕೇಂದ್ರೀಯ ಮಾಹಿತಿ ಆಯೋಗವು (ಸಿಐಸಿ) 2016 ರಲ್ಲಿ ದೆಹಲಿ ವಿವಿ ಮತ್ತು ಗುಜರಾತ್ ವಿವಿಗೆ ಪಿಎಂ ಮೋದಿ ಅವರ ಪದವಿಯ ವಿವರಗಳನ್ನು ಬಹಿರಂಗಪಡಿಸುವಂತೆ ಸೂಚಿಸಿತ್ತು. ಸಿಐಸಿಯ ಆದೇಶಕ್ಕೆ ಪ್ರತಿಯಾಗಿ ಗುಜರಾತ್ ಹೈಕೋರ್ಟ್ 2016 ಜುಲೈ ನಲ್ಲಿ ಮಾಹಿತಿಯ ಬಿಡುಗಡೆಯನ್ನು ತಡೆದಿತ್ತು. ಫೆಬ್ರವರಿಯಲ್ಲಿ ಗುಜರಾತ್ ಹೈಕೋರ್ಟ್ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು.