ನವದೆಹಲಿ:ಆಮ್ ಆದ್ಮಿ ಪಕ್ಷದ ಸಂಸ್ಥಾಪಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ದೊಡ್ಡ ಹಿನ್ನಡೆ ಎಂಬಂತೆ, ಕೇಜ್ರಿವಾಲ್ ವಿರುದ್ಧ ಅಗತ್ಯವಾದ ಕಾನೂನು ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.
ಜನವರಿ 8ರಂದು ಗೋವಾದಲ್ಲಿ ನೀಡಿರುವ ಹೇಳಿಕೆ ಸಂಬಂಧ ಅರವಿಂದ್ ಕೇಜ್ರಿವಾಲ್ ವಿರುದ್ಧ ಎಫ್ಐಆರ್ ದಾಖಲಿಸಿ, ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗ ಸೂಚನೆ ನೀಡಿರುವುದಾಗಿ ಎಎನ್ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಕೇಜ್ರಿವಾಲ್ ವಿರುದ್ಧ ಕೈಗೊಂಡ ಕಾನೂನು ಕ್ರಮದ ವರದಿಯನ್ನು ಜನವರಿ 31ರ 3ಗಂಟೆಯೊಳಗೆ ಆಯೋಗಕ್ಕೆ ಕಳುಹಿಸಿಕೊಡಬೇಕೆಂದು ಸೂಚನೆ ನೀಡಿದೆ. ಈ ಹಿಂದೆಯೇ ಚುನಾವಣಾ ಪ್ರಚಾರದ ವೇಳೆ ಇಂತಹದೇ ಕಾನೂನು ಕ್ರಮ ಉಲ್ಲಂಘಿಸಿದ್ದು ಗಮನಕ್ಕೆ ಬಂದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿತ್ತು.
ಚುನಾವಣಾ ಆಯೋಗದ ಕ್ರಮದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್, ಆಯೋಗದ ಕ್ರಮ ತಪ್ಪು, ತಾನು ಇದನ್ನು ಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ತಿಳಿಸಿದ್ದಾರೆ.
ಕೇಜ್ರಿವಾಲ್ ಗೋವಾದಲ್ಲಿ ಹೇಳಿದ್ದೇನು?
ಗೋವಾದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ್ದ ಅರವಿಂದ್ ಕೇಜ್ರಿವಾಲ್, ಯಾವುದೇ ಪಕ್ಷ ಹಣ ಹಂಚಿದರೂ ಅದನ್ನು ಸ್ವೀಕರಿಸಿ, ಆದರೆ ಮತ ಮಾತ್ರ ಆಪ್ ಗೆ ಹಾಕಿ ಎಂದು ವಿವಾದಾತ್ಮಕ ಕರೆ ನೀಡಿದ್ದರು. ಕೇಜ್ರಿವಾಲ್ ಹೇಳಿಕೆ ನೀತಿ ಸಂಹಿತೆ ಉಲ್ಲಂಘನೆ ಎಂದು ಆರೋಪಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.