Advertisement
“ಟಗರು’ ಚಿತ್ರದ ಮೊದಲ 20 ನಿಮಿಷದಲ್ಲೇ ಇವೆಲ್ಲಾ ಆಗಿ ಹೋಗುತ್ತದೆ. ಈ ಎಲ್ಲಾ ಕೊಲೆಗಳಿಂದ ಚಿತ್ರದ ಕಥೆಯೂ ಮುಗಿದು ಹೋಗುತ್ತದೆ. ಹಾಗಂತ ಚಿತ್ರ ಮುಗಿದು ಹೋಗುತ್ತದೆ ಎಂದು ಭಾವಿಸಬೇಕಿಲ್ಲ. ನಿಜ ಹೇಳಬೇಕೆಂದರೆ, ಚಿತ್ರ ಶುರುವಾಗುವುದೇ ಅಲ್ಲಿಂದ. ಅಲ್ಲಿಂದ ಅವೆಲ್ಲಾ ಏಕಾಯ್ತು ಮತ್ತು ಹೇಗಾಯ್ತು ಎಂದು ವಿವರಿಸುತ್ತಾ ಹೋಗುತ್ತಾರೆ ಸೂರಿ. ಆಗ ಮತ್ತೆ ಮೇಲೆ ಹೇಳಿದ ದೃಶ್ಯಗಳು ಬರುತ್ತಾ ಹೋಗುತ್ತವೆ. ಆಗ ಪ್ರೇಕ್ಷಕನಿಗೆ, ಯಾರು ಯಾರನ್ನು ಏಕೆ ಸಾಯಿಸುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ.
Related Articles
Advertisement
ಯಾವುದೋ ದೃಶ್ಯವಾದ ಮೇಲೆ ಇನ್ನೇನನ್ನೋ ತರುತ್ತಾರೆ ಮತ್ತು ಅದರ ನಂತರ ಮತ್ತೇನನ್ನೋ ಮುಂದಿಡುತ್ತಾರೆ. ಎಲ್ಲವೂ ಸ್ಪಷ್ಟವಾಗಬೇಕಾದರೆ ತುಂಬಾ ತಾಳ್ಮೆಬೇಕು. ಏಕೆಂದರೆ, ಮೊದಲ ದೃಶ್ಯಕ್ಕೆ 60ನೇ ದೃಶ್ಯದಲ್ಲಿ ಸ್ಪಷ್ಟತೆ ಸಿಗುತ್ತದೆ. ನಾಲ್ಕನೇ ದೃಶ್ಯದಲ್ಲಿ ಏನಾಯಿತು ಎಂದು ಗೊತ್ತಾಗುವುದಕ್ಕೆ 40ನೇ ದೃಶ್ಯದವರೆಗೂ ಕಾಯಬೇಕಾಗುತ್ತದೆ. ಒಟ್ಟಿನಲ್ಲಿ ಯಾವುದನ್ನೂ ವೇಸ್ಟ್ ಮಾಡದೆ, ಎಲ್ಲದಕ್ಕೂ ಒಂದು ಸೂತ್ರ-ಸಂಬಂಧ ಇಟ್ಟೇ ಚಿತ್ರ ಮಾಡಿದ್ದಾರೆ.
ಆದರೆ, ಅದಕ್ಕೆಲ್ಲಾ ಕಾಯುವ ಮತ್ತು ಅರ್ಥ ಮಾಡಿಕೊಳ್ಳುವ ತಾಳ್ಮೆ ಪ್ರೇಕ್ಷಕರಿಗೆ ಇದ್ದರೆ, “ಟಗರು’ ಗುಮ್ಮುವುದನ್ನು ಎಂಜಾಯ್ ಮಾಡಬಹುದು. ಸೂರಿ ಚಿತ್ರಗಳೆಂದರೆ ಮಬ್ಬುಗತ್ತಲು, ಸ್ಲಮ್, ರೌಡಿಸಂ, ವಿಚಿತ್ರ ಹೆಸರುಗಳು ಇವೆಲ್ಲಾ ಮಾಮೂಲಿ. ಇದನ್ನೆಲ್ಲಾ ಬಿಟ್ಟು ಚಿತ್ರ ಮಾಡುವುದು ಸೂರಿಗೆ ಕಷ್ಟ ಎನ್ನುವಲ್ಲಿಗೆ ಅವರಿ ಮುಂದೆ ಸಾಗಿದ್ದಾರೆ. ಆದರೆ, ಈ ಹಿಂದಿನ ಚಿತ್ರಗಳಲ್ಲಿ ಇದೆಲ್ಲವನ್ನೂ ಸೂರಿ ಬಹಳ ಸೂಕ್ಷ್ಮವಾಗಿ ಮತ್ತು ವಿಭಿನ್ನವಾಗಿ ಬಳಸಿಕೊಂಡಿದ್ದರು.
ಇಲ್ಲೂ ಆ ತರಹದ ಪ್ರಯತ್ನವನ್ನು ಅವರು ಮಾಡಿದ್ದಾರೆ. ಒಟ್ಟಾರೆ ಚಿತ್ರಕಥೆ ಮತ್ತು ನಿರೂಪಣೆಯನ್ನು ಇನ್ನಷ್ಟು ಸರಳೀಕರಿಸುವ ಸಾಧ್ಯತೆ ಇತ್ತು. ಆದರೆ, ಪ್ರೇಕ್ಷಕರಿಗೆ ಹುಳ ಬಿಡಬೇಕೆಂದು ಹಾಗೆ ಮಾಡಿದರೋ ಅಥವಾ ಕೆಲವು ಕಡೆ ಚಿತ್ರ ಅವರ ಕೈತಪ್ಪಿ ಮುಂದೆ ಸಾಗಿತೋ ಗೊತ್ತಿಲ್ಲ. ಇದೆಲ್ಲದರಿಂದ ಇಕ್ಕಟ್ಟಿಗೆ ಸಿಲುಕುವುದು ಪ್ರೇಕ್ಷಕ ಎಂದರೆ ತಪ್ಪಿಲ್ಲ. ಸೂರಿಯೇನೋ ಒಂದಿಷ್ಟು ಗೊಂದಲ ಮಾಡಿ, ಕೊನೆಗೆ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ ಚಿತ್ರವನ್ನು ರೂಪಿಸುತ್ತಾರೆ.
ಆದರೆ, ಯಾವ ದೃಶ್ಯ ಎಲ್ಲಿಗೆ ನಿಂತಿತು ಮತ್ತು ಅದು ಹೇಗೆ ಮುಂದುವರೆಯುತ್ತದೆ ಎಂದು ನೆನಪಿಟ್ಟುಕೊಂಡು, ಒಂದು ಕಥೆಯನ್ನು ಮನಸ್ಸಿನಲ್ಲಿ ರೂಪಿಸಿಕೊಳ್ಳುವುದು ಅಷ್ಟು ಸುಲಭವೇನಲ್ಲ. ಹಾಗಾಗಿ ಪ್ರೇಕ್ಷಕ ಈ ಚಿತ್ರವನ್ನು ನೋಡುವಾಗ ಸ್ವಲ್ಪ ಜಾಸ್ತಿಯೇ ಬುದ್ಧಿ ಉಪಯೋಗಿಸಬೇಕು. ಸಮಸ್ಯೆಗಳನ್ನು ಪಕ್ಕಕ್ಕಿಟ್ಟು ನೋಡಿದರೆ, ಈ ಚಿತ್ರ ಖುಷಿಯಾಗುವುದು ಶಿವರಾಜಕುಮಾರ್ ಅವರಿಂದಾಗಿ. ಇಲ್ಲಿ ಶಿವರಾಜಕುಮಾರ್ ಪಾತ್ರ ಅಬ್ಬರವೇನಿಲ್ಲ.
ಆರಂಭದಲ್ಲಿ “ಟಗರು ಟಗರು’ ಎಂಬ ಅಬ್ಬರದ ಬಿಲ್ಡಪ್ ಸಾಂಗ್ ಒಂದು ಬಿಟ್ಟರೆ, ಇಡೀ ಚಿತ್ರದುದ್ದಕ್ಕೂ ಅವರ ಪಾತ್ರ ತಣ್ಣಗಿದೆ ಮತ್ತು ಶಿವರಾಜಕುಮಾರ್ ಅಷ್ಟೇ ಚೆನ್ನಾಗಿ ಮೈಯೆಲ್ಲಾ ಪೊಗರಿರುವ ಟಗರು ಪಾತ್ರವನ್ನು ಹಿಡಿದಿಟ್ಟಿದ್ದಾರೆ. ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಧನಂಜಯ್ ಮತ್ತು ವಸಿಷ್ಠ ಸಿಂಹ, ತಮಗೆ ಸಿಕ್ಕ ಅವಕಾಶದಲ್ಲಿ ಮಿಂಚಿದ್ದಾರೆ. ಅವರ ಪಾತ್ರಗಳಿಗೆ ಇನ್ನಷ್ಟು ಫೋಕಸ್ ಬೇಕಿತ್ತು.
ಇಬ್ಬರು ನಾಯಕಿಯ ಪೈಕಿ ಇಷ್ಟವಾಗುವುದು ಮಾನ್ವಿತಾ ಹರೀಶ್. ಸುಧೀರ್, ದೇವರಾಜ್ ಮಿಕ್ಕೆಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಚಿತ್ರ ಹೇಗೇ ಇರಲಿ, ಅದನ್ನು ಬಹಳ ಚೆನ್ನಾಗಿ ಹಿಡಿದಿಟ್ಟಿರುವುದು ಛಾಯಾಗ್ರಾಹಕ ಮಹೇಂದ್ರ ಸಿಂಹ. ಬೆಂಗಳೂರಿನ ರಸ್ತೆಗಳಾಗಲೀ, ಸಮುದ್ರ ತೀರವಾಗಲೀ, ಕತ್ತಲೆ ರಾತ್ರಿಗಳಾಗಲೀ … ಅವೆಲ್ಲವನ್ನೂ ಬಹಳ ಚೆನ್ನಾಗಿ ಹಿಡಿದಿಟ್ಟಿದ್ದಾರೆ. ಇನ್ನು ಚರಣ್‌ರಾಜ್ ಸಂಗೀತದಲ್ಲಿ ಹಾಡುಗಳೆಲ್ಲಾ ಖುಷಿಕೊಡುತ್ತವೆ.
ಚಿತ್ರ: ಟಗರುನಿರ್ದೇಶನ: ಸೂರಿ
ನಿರ್ಮಾಣ: ಕೆ.ಪಿ. ಶ್ರೀಕಾಂತ್
ತಾರಾಗಣ: ಶಿವರಾಜಕುಮಾರ್, ಧನಂಜಯ್, ವಸಿಷ್ಠ ಸಿಂಹ, ಭಾವನಾ ಮೆನನ್, ಮಾನ್ವಿತಾ ಹರೀಶ್, ದೇವರಾಜ್ ಮುಂತಾದವರು * ಚೇತನ್ ನಾಡಿಗೇರ್