ಬಂಟ್ವಾಳ: ನಮ್ಮ ಪರಂಪರಾಗತ ಸಂಸ್ಕೃತಿಯನ್ನು ಬದುಕಿನಲ್ಲಿ ಅಳವಡಿಸಿ ಕೊಳ್ಳುವ ಮೂಲಕ ಧಾರ್ಮಿಕ ಸಂಪನ್ನತೆ ಯನ್ನು ಉಳಿಸಿ ಬೆಳೆಸಬೇಕು. ಆಮಂತ್ರಣ ಪತ್ರಿಕೆ, ಫ್ಲೆಕ್ಸ್‌ಗಳಲ್ಲಿ ದೇವರ ಚಿತ್ರವನ್ನು ಕಡ್ಡಾಯವಾಗಿ ನಾವೇ ನಿಷೇಧಿಸೋಣ. ಮದ್ಯಪಾನದ ಚಟಕ್ಕೆ ಬಲಿ ಬೀಳದಿರುವ ಸಂಕಲ್ಪ ನಮ್ಮದಾಗಲಿ. ಶುಭ ಕಾರ್ಯ ಕ್ರಮಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಗಳ ಅನುಕರಣೆ ಬೇಡ ಎಂಬ ಸಂಕಲ್ಪ ನಮ್ಮೆಲ್ಲರದಾಗಲಿ ಎಂದು ಶ್ರೀರಾಮ ನಾಮ ತಾರಕ ಜಪಯಜ್ಞ ಸಮಿತಿ ಅಧ್ಯಕ್ಷ ತಾರಾನಾಥ ಕೊಟ್ಟಾರಿ ಕರೆ ನೀಡಿದರು.
ಅವರು ಎ. 7ರಂದು ಕಳ್ಳಿಗೆ ಬೀಡು ಬಾಕಿಮಾರು ಗದ್ದೆಯಲ್ಲಿ ನಡೆದ ಶ್ರೀರಾಮ ನಾಮ ತಾರಕ ಜಪಯಜ್ಞದ ಪೂರ್ಣಾ ಹುತಿ ಬಳಿಕದ ಸುಧರ್ಮ ಸಭೆಯಲ್ಲಿ ಮಾತನಾಡಿದರು. ಆಧ್ಯಾತ್ಮಿಕ ಚಿಂತಕ, ವಿದ್ವಾಂಸ ಹಿರಣ್ಯ ವೆಂಕಟೇಶ್ ಭಟ್, “ಯಜ್ಞ, ಜಪಗಳಲ್ಲಿ ಭಗವಂತನೇ ಇರುತ್ತಾನೆ. ಜಪಯಜ್ಞದಲ್ಲಿ ಭಗವಂತ ಶ್ರೀಕೃಷ್ಣ ಇರುತ್ತಾನೆ. ಶ್ರೀರಾಮ ನಾಮ ತಾರಕ ಮಂತ್ರವನ್ನು ಉಪನಿಷತ್‌ನಲ್ಲಿಯೂ ಹೇಳಿದ್ದಾರೆ. ಸಂಸ್ಕಾರಗಳನ್ನು ಉತ್ತರಿಸುವ ಮಂತ್ರವೇ ತಾರಕ ಮಂತ್ರ. ಶ್ರೀರಾಮ ನಾಮ ಜಪ ಮನಸ್ಸಿಗೆ ಶಾಂತಿ, ಬದುಕಿಗೆ ದೃಢತೆ, ನ್ಯಾಯದ ಹಾದಿಯಲ್ಲಿ ನಡೆಯಲು ಪ್ರೇರಣೆ, ಸನ್ಮಾರ್ಗದ ಚಿಂತನೆ, ಎಲ್ಲರನ್ನು ಒಗ್ಗೂಡಿಸಿ ಮುನ್ನಡೆಯುವ ನಾಯಕತ್ವದ ಗುಣ ನೀಡುವುದು’ ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ರಮಾನಾಥ ಹೆಗ್ಡೆ ಮಾತನಾಡಿ, ಎಲ್ಲವೂ ಭಗವದ್ ಸಂಕಲ್ಪದಲ್ಲಿ ನಡೆಯುತ್ತದೆ. ಪೂರ್ಣಾಹುತಿ ಆದಾಗ ನಮ್ಮ ಮನಸ್ಸಿನ ಒತ್ತಡ ನಿವಾರಣೆಯಾಗಿ ಇದೆಲ್ಲವನ್ನು ನಾವು ಮಾಡಿಸಿದ್ದೇ ಎಂಬ ಚಿಂತನೆ ಬರುವುದೇ ನಿಜವಾದ ದೈವ ಸಂಕಲ್ಪದ ಅರಿವನ್ನು ತರುವುದು ಎಂದರು.
ಪೊಳಲಿ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ, ಸಮಿತಿ ಗೌ.ಸಲಹೆಗಾರ ಕೊಡಾಣ್ ಕಾಂತಪ್ಪ ಶೆಟ್ಟಿ, ಯಜ್ಞ ಪುರೋಹಿತ ಕಶೆಕೋಡಿ ಸೂರ್ಯನಾರಾಯಣ ಭಟ್, ಎಂ.ಆರ್. ನಾಯರ್ ರಾಮಲ್‌ಕಟ್ಟೆ, ಪ್ರವೀಣ್ ತುಂಬೆ, ಉಮೇಶ್ ಸುವರ್ಣ ತುಂಬೆ, ಐತಪ್ಪ ಆಳ್ವ, ಭಾಸ್ಕರ ಚೌಟ ಕುಮೆಲು, ರಾಜಶೇಖರ ರೈ ಕಳ್ಳಿಗೆ, ಪ್ರಕಾಶ್ ಶೆಟ್ಟಿ ಶ್ರೀಶೈಲ ತುಂಬೆ, ಶಶಿಧರ ಬ್ರಹ್ಮರಕೂಟ್ಲು, ದೂಮ ಮೂಲ್ಯ, ನವೀನ್‌ಚಂದ್ರ ಶೆಟ್ಟಿ ಮುಂಡಾಜೆಗುತ್ತು ಉಪಸ್ಥಿತರಿದ್ದರು. ಯುವಭಾರತಿ ನೆತ್ತರಕೆರೆ ಸದಸ್ಯರು ಆಶಯಗೀತೆ ಹಾಡಿದರು. ಜ್ಯೋತಿಗುಡ್ಡೆ ದುರ್ಗಾಪರಮೇಶ್ವರೀ ಭಜನ ಮಂದಿರದ ಸದಸ್ಯರು ಸಹಕರಿಸಿದರು.
ಸಮಿತಿ ಅಧ್ಯಕ್ಷರು ಸ್ವಾಗತಿಸಿ, ಸಂಚಾಲಕ ದಾಮೋದರ ನೆತ್ತರಕೆರೆ ವಂದಿಸಿ, ಉಮೇಶ್ ರೆಂಜೋಡಿ, ಪ್ರವೀಣ್ ಕುಮಾರ್ ಜ್ಯೋತಿಗುಡ್ಡೆ ಸಹಕರಿಸಿದರು. ಸದಸ್ಯ ಚೇತನ್ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು.