ವಾಡಿ: ಪಟ್ಟಣದ ಪುರಸಭೆ ಮೂರನೇ ಅವಧಿ ಚುನಾವಣೆಗೆ ಸರಕಾರ ಪ್ರಕಟಿಸಿದ್ದ ವಾರ್ಡ್‌ವಾರು ಮೀಸಲಾತಿ ಅಧಿಧಿಸೂಚನೆ ಪಟ್ಟಿಗೆ ಸಂಬಂಧಿಸಿದಂತೆ ಸ್ಥಳೀಯರು ಸಲ್ಲಿಸಿದ್ದ ಆಕ್ಷೇಪಣಾ ಅರ್ಜಿಗಳು ಅನರ್ಹಗೊಂಡಿದ್ದು, ಪ್ರಕಟಿಸಲಾಗಿರುವ ಮೀಸಲಾತಿ ಪಟ್ಟಿಯನ್ನೆ ಅಂತಿಮಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
ಪಟ್ಟಣದ ಪುರಸಭೆ ಆಡಳಿತದ ಐದು ವರ್ಷದ ಅಧಿಕಾರವಧಿ ಪೂರ್ಣಗೊಂಡಿದ್ದು, ಸರಕಾರ ಚುನಾವಣಾ ಪ್ರಕ್ರಿಯೆಗೆ ಚಾಲನೆ ನೀಡಿದೆ. ಒಟ್ಟು 23 ವಾರ್ಡ್‌ಗಳನ್ನು ಜನಸಂಖ್ಯಾಧಾರಿತವಾಗಿ ಮರುವಿಂಗಡಣೆ ಮಾಡಲಾಗಿದ್ದು, ವಾರದ ಹಿಂದೆಯಷ್ಟೇ ವಾರ್ಡ್‌ವಾರು ಮೀಸಲಾತಿ ಕರಡು ಪ್ರಕಟಿಸಲಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದರೆ ಬಲವಾದ ಕಾರಣಗಳು ಮತ್ತು ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ಏಳು ದಿನಗಳ ಕಾಲಾವಕಾಶ ನೀಡಲಾಗಿತ್ತು. ಮೀಸಲಾತಿ ಹಂಚಿಕೆ ನಿಯಮ ಪ್ರಶ್ನಿಸಿ ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯ್ಯದ್ ಮಹೆಮೂದ್ ಸಾಹೇಬ, ಕಾಂಗ್ರೆಸ್ ಮೈನಾರಿಟಿ ಘಟಕದ ಕಾರ್ಯದರ್ಶಿ ನಾಸೀರ್ ಹುಸೇನ್ ಹಾಗೂ ಪುರಸಭೆ ಅಧ್ಯಕ್ಷ, ಬಿಜೆಪಿಯ ಭಾಗವತ ಸುಳೆ ಸೇರಿದಂತೆ ಒಟ್ಟು ಮೂರು ಆಕ್ಷೇಪಣಾ ಅರ್ಜಿಗಳು ಜಿಲ್ಲಾಧಿ ಧಿಕಾರಿಗಳಿಗೆ ಸಲ್ಲಿಕೆಯಾಗಿದ್ದವು.
ಅರ್ಜಿ ಪರಿಶೀಲಿಸಿರುವ ನಗರಾಭಿವೃದ್ಧಿ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಕೆ.ಎಲ್. ಬಾಗಲವಾಡೆ, ಮೀಸಲಾತಿಯಲ್ಲಿ ಕಿಂಚಿತ್ತೂ ಬದಲಾವಣೆ ಮಾಡದೆ ಕರಡು ಮೀಸಲಾತಿ ಪಟ್ಟಿಯನ್ನೆ ಅಂತಿಮಗೊಳಿಸಿ ಆದೇಶ ಹೊರಡಿಸಿದ್ದಾರೆ. ಮೀಸಲಾತಿ ಪಟ್ಟಿಯಲ್ಲಿ ಬಿಸಿ(ಎ) ಮತ್ತು ಬಿಸಿ(ಬಿ) ವರ್ಗಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ಆಕ್ಷೇಪಣೆ ಸಲ್ಲಿಸಿದ್ದವರಿಗೆ ಇದರಿಂದ ಹಿನ್ನಡೆಯಾದಂತಾಗಿದೆ.
ಮತದಾರರ ಪಟ್ಟಿ ಸಿದ್ಧತೆಗೆ ಆದೇಶ: ಪುರಸಭೆ ಚುನಾವಣೆಗೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಸಿದ್ಧತೆಗಳು ಆರಂಭವಾಗಿದ್ದು, ಅಧಿಧಿಕಾರಿಗಳು ಚುರುಕಿನಿಂದ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಈ ಕುರಿತು ಬುಧವಾರ ಪಟ್ಟಣದ ಪುರಸಭೆಗೆ ಭೇಟಿ ನೀಡಿದ ಶಿರಸ್ತೇದಾರ ಶ್ರೀನಿವಾಸ ಚಾಪೆಲ್, ಗ್ರಾಮ ಲೆಕ್ಕಿಗರು ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಬಿಎಲ್‌ಒಗಳನ್ನಾಗಿ ನೇಮಿಸಿ ಸಭೆ ನಡೆಸಿದರು.
ವಾರ್ಡ್‌ವಾರು ಮತದಾರರ ಪಟ್ಟಿಯನ್ನು ತಕ್ಷಣ ಸಿದ್ಧಪಡಿಸಿ ಸಲ್ಲಿಸುವಂತೆ ಆದೇಶ ನೀಡಿದರು. ತಲಾಟಿ ವೀರಭದ್ರಪ್ಪ ಗೋಡಿಯಾಳ, ಪುರಸಭೆ ನೋಡಲ್ ಅಭಿಯಂತರ ಮನೋಜಕುಮಾರ ಹಿರೋಳಿ, ಈಶ್ವರ ಅಂಬೇಕರ, ರಾಹುಲ ಹುಗ್ಗಿ, ನಾಗು ವಾಲೀಕಾರ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.