Advertisement

ಇನ್ನೂ 10 ದಿನ ವಿಸ್ತರಿಸಿ: ಶಾಸಕ ಯು. ಟಿ. ಖಾದರ್‌

11:32 PM Sep 14, 2020 | mahesh |

ಮಂಗಳೂರು: ರಾಜ್ಯ ಸರಕಾರವು ಸೆ. 21ರಿಂದ ಕೇವಲ 8 ದಿನ ವಿಧಾನ ಮಂಡಲದ ಅಧಿವೇಶನ ನಡೆಸಲು ನಿರ್ಧರಿಸಿರುವುದು ಸರಿಯಲ್ಲ; ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ, ಕಾನೂನು ಸುವ್ಯವಸ್ಥೆ ಸೇರಿದಂತೆ ವಿವಿಧ ವಿಚಾರಗಳ ಚರ್ಚೆ ಇರುವುದರಿಂದ ಇನ್ನೂ 10 ದಿನಗಳವರೆಗೆ ವಿಸ್ತರಿಸಬೇಕು ಎಂದು ಶಾಸಕ ಯು.ಟಿ. ಖಾದರ್‌ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

Advertisement

ಕಾಟಾಚಾರಕ್ಕೆ ಎಂಬಂತೆ ಅಥವಾ ಮಸೂದೆ ಪಾಸ್‌ ಮಾಡುವ ಉದ್ದೇಶ ದಿಂದ ಮಾತ್ರ ಅಧಿವೇಶನ ನಡೆಸುವುದು ಸರಿಯಲ್ಲ. ಅಧ್ಯಾದೇಶವಾಗಿರುವ ಭೂಸುಧಾರಣಾ ಕಾಯ್ದೆ ತಿದ್ದುಪಡಿಯಿಂದಾಗುವ ಸಮಸ್ಯೆ, ಎಪಿಎಂಸಿ ಕಾಯ್ದೆ  ತಿದ್ದುಪಡಿಯಿಂದ ಮುಂದೆ ಎದುರಾಗುವ ಸವಾಲು, ರಾಷ್ಟ್ರೀಯ ಶಿಕ್ಷಣ ನೀತಿ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಚರ್ಚೆ ಮಾಡಬೇಕಿದೆ. ಜತೆಗೆ ಪ್ರಕೃತಿ ವಿಕೋಪದಿಂದ ಸೂಕ್ತ ಪರಿಹಾರ ದೊರೆಯದ ವಿಚಾರ, ಶಾಸಕರ ಮನೆಗೆ ಬೆಂಕಿ ಇಟ್ಟ ವಿಚಾರ, ಪಡಿತರ ಸೇರಿದಂತೆ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಇನ್ನೂ ಸಮಯಾವಕಾಶ ಬೇಕು ಎಂದರು.

ಡ್ರಗ್ಸ್‌; ರಾಜಕೀಯ ಬೇಡ
ಡ್ರಗ್ಸ್‌ ಪ್ರಕರಣದಲ್ಲಿ ಇದೀಗ ಕಾಂಗ್ರೆಸ್‌ ಹೆಸರು ಕೇಳಿಬರುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಖಾದರ್‌ ಅವರು, “ಡ್ರಗ್ಸ್‌ ವಿಚಾರದಲ್ಲಿ ರಾಜಕೀಯಕ್ಕೆ ಲಿಂಕ್‌ ಹಾಕುತ್ತಿರುವುದು ಯಾಕೆ? ಕಾನೂನುಬಾಹಿರ ಚಟುವಟಿಕೆಗೆ ಜಾತಿ, ಧರ್ಮ ವನ್ನು ಬೆಸೆಯುವುದು ಸರಿಯಲ್ಲ. ಬದಲಾಗಿ ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿ. ಶ್ರೀಲಂಕಾಕ್ಕೆ ಕೆಲವರು ಹೋಗಿದ್ದಾರೆ
ಎಂಬ ಆರೋಪವಿದೆ. ಅವರಿಗೆ ವೀಸಾ ಕೊಟ್ಟಿದ್ದು ಅಥವಾ ಅಲ್ಲಿಗೆ ವಿಮಾನ ಸೇವೆ ವ್ಯವಸ್ಥೆ ಮಾಡುವುದು  ಕೇಂದ್ರ ಸರಕಾರವಲ್ಲವೇ? ಹೀಗಾಗಿ ಈ ವಿಚಾರದಲ್ಲಿ ರಾಜಕೀಯ ಮಾತನಾಡುವ ಬದಲು ರಾಜ್ಯದಲ್ಲಿ, ದಕ್ಷಿಣ ಕನ್ನಡದಲ್ಲಿ ನಾರ್ಕೊಟಿಕ್‌ ಸೆಲ್‌ ಬಲಿಷ್ಠಗೊ ಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿ ಎಂದರು.

ಮಂಗಳೂರು ತಾ.ಪಂ. ಅಧ್ಯಕ್ಷ ಮೊಹಮ್ಮದ್‌ ಮೋನು, ಕಾಂಗ್ರೆಸ್‌ ಮುಖಂಡ ಸದಾಶಿವ ಉಳ್ಳಾಲ ಮುಂತಾದವರು ಉಪಸ್ಥಿತರಿದ್ದರು.

ಮರಳು ಸಿಗದ ಪರಿಸ್ಥಿತಿ
ದ.ಕ. ಜಿಲ್ಲೆಯಲ್ಲಿ ಮರಳು ಸಮಸ್ಯೆ ಬಹುವಾಗಿ ಕಾಡುತ್ತಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಮರಳು ಸಿಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಈ ವಿಚಾರದಲ್ಲಿ ಮಾತನಾಡುವುದೇ ಇಲ್ಲ. ಸ್ಯಾಂಡ್‌ ಬಜಾರ್‌ ಆ್ಯಪ್‌ ಜಾರಿಗೊಳಿಸಿದರೆ ಎಲ್ಲವೂ ಸರಿಯಾಗಲಿದೆ. ನಿಗದಿತ ಬೆಲೆ ಹಾಗೂ ನಿಗದಿತ ಸಮಯಕ್ಕೆ ಮರಳು ಸಿಗುವಂತೆ ಜಿಲ್ಲಾಡಳಿತ ಇನ್ನಾದರೂ ಕ್ರಮ ಕೈಗೊಳ್ಳಲಿ ಎಂದು ಶಾಸಕ ಯು.ಟಿ. ಖಾದರ್‌ ಆಗ್ರಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next