Advertisement
ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಗೊಂದಲವನ್ನು ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಳ್ಳಲು ಬಿಜೆಪಿ ರಣತಂತ್ರ ರೂಪಿಸಿಕೊಂಡಿದ್ದರೆ, ಹಿಂದಿನ ಸರಕಾರದ ಅವಧಿಯ ಹಗರಣಗಳನ್ನು ಗುರಾಣಿಯನ್ನಾಗಿ ಮಾಡಿಕೊಂಡು ಬಿಜೆಪಿಯನ್ನು ಕಟ್ಟಿಹಾಕಲು ಆಡಳಿತ ಪಕ್ಷ ಕಾಂಗ್ರೆಸ್ ಪ್ರತಿತಂತ್ರ ಹೆಣೆದಿದೆ. ಸರಕಾರದ ವಿರುದ್ಧ ವಿಷಯಾಧಾರಿತ ಹೋರಾಟ ಮಾಡಲು ಜೆಡಿಎಸ್ ನಿರ್ಧರಿಸಿದೆ. ಒಟ್ಟಿನಲ್ಲಿ ಸದನಲ್ಲಿ ಜಂಗಿ ಕುಸ್ತಿ ನಡೆಯುವುದಂತೂ ಗ್ಯಾರಂಟಿ.
ಸಂಪ್ರದಾಯದಂತೆ ಸೋಮವಾರ ಮಧ್ಯಾಹ್ನ 12 ಗಂಟೆಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಉಭಯ ಸದನಗಳನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ರಾಜ್ಯಪಾಲರ ಭಾಷಣದ ಬಳಿಕ ವಿಧಾನಪರಿಷತ್ ಕಲಾಪ ನಡೆಯಲಿದ್ದು, ಅಲ್ಲಿ ರಾಜ್ಯಪಾಲರ ಭಾಷಣದ ಪ್ರತಿ ಸದನದಲ್ಲಿ ಮಂಡನೆಯಾಗಲಿದೆ. ಅನಂತರ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಗುತ್ತದೆ. ಜು. 3ರಿಂದ 14ರ ವರೆಗೆ ಅಧಿವೇಶನ ಇರಲಿದ್ದು, ಜು. 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ ಮಂಡಿಸಲಿದ್ದಾರೆ. ಮೇ 24ರಂದು ಕೊನೆಗೊಂಡಿದ್ದ ಅಧಿವೇಶನ ನೂತನ ಶಾಸಕರ ಪ್ರಮಾಣವಚನ ಹಾಗೂ ಸ್ಪೀಕರ್ ಆಯ್ಕೆಗೆ ಸೀಮಿತವಾಗಿತ್ತು. ಹಾಗಾಗಿ 16ನೇ ವಿಧಾನಸಭೆಗೆ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿರುವ 70 ಮಂದಿಗೆ ಇದು ಮೊದಲ ಅಧಿವೇಶನ ಮತ್ತು ಹೊಸ ಅನುಭವ ಆಗಲಿದೆ.
Related Articles
ರಾಜ್ಯದಲ್ಲಿ ಬಲವಂತದ ಹಾಗೂ ಆಮಿಷದ ಮತಾಂತರ ನಿಷೇಧಿಸುವ ಉದ್ದೇಶದಿಂದ ಹಿಂದಿನ ಬಿಜೆಪಿ ಸರಕಾರ 2022ರಲ್ಲಿ ಜಾರಿಗೆ ತಂದಿದ್ದ ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣ ಕಾಯ್ದೆಯನ್ನು ರದ್ದುಗೊಳಿಸಲಿರುವ ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣ ಮಸೂದೆ-2023 ಸದನದಲ್ಲಿ ಮಂಡನೆಯಾಗಲಿದೆ. ಇದಲ್ಲದೆ ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯೂ ಸದನದ ಮುಂದೆ ಬರಲಿದೆ. ಜತೆಗೆ ಬಹುದಿನದ ಬೇಡಿಕೆಯಾಗಿದ್ದ ಕರಾವಳಿ ಅಭಿವೃದ್ದಿ ಮಂಡಳಿ ಮಸೂದೆಯನ್ನು ಹೊಸದಾಗಿ ತರಲಾಗುತ್ತಿದೆ. ಅಧಿವೇಶನ ಮುಗಿಯುವುದರೊಳಗೆ ಈ ಪಟ್ಟಿಯಲ್ಲಿ ಕೆಲವು ಸೇರ್ಪಡೆಗಳಾದರೂ ಆಗಬಹುದು.
Advertisement
ಅಧಿವೇಶನದಲ್ಲಿ ಮಂಡನೆಯಾಗುವ ಮಸೂದೆಗಳು– ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣ (ನಿರಸನ) ಮಸೂದೆ-2023
– ಕರ್ನಾಟಕ ಗೋಹತ್ಯೆ ತಡೆ ಹಾಗೂ ಜಾನುವಾರು ಸಂರಕ್ಷಣ (ತಿದ್ದುಪಡಿ) ಮಸೂದೆ-2023
– ಕರಾವಳಿ ಅಭಿವೃದ್ಧಿ ಮಂಡಳಿ ಮಸೂದೆ-2023
– ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ (ತಿದ್ದುಪಡಿ) ಮಸೂದೆ-2023
– ಬಯಲುಸೀಮೆ ಅಭಿವೃದ್ಧಿ ಮಂಡಳಿ (ತಿದ್ದುಪಡಿ) ಮಸೂದೆ-2023
– ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ಮಸೂದೆ-2023
– ವೈದ್ಯಕೀಯ ಕೋರ್ಸ್ ಮುಗಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವೆ (ತಿದ್ದುಪಡಿ) ಮಸೂದೆ-2023
– ಶಾಸಕರ (ಅನರ್ಹತೆ ತಡೆ) ತಿದ್ದುಪಡಿ ಮಸೂದೆ-2023
—————-
ಬೆಳಿಗ್ಗೆ 11.55-ವಿಧಾನಸೌಧಕ್ಕೆ ರಾಜ್ಯಪಾಲರ ಆಗಮನ
ಮಧ್ಯಾಹ್ನ 12: ರಾಜ್ಯಪಾಲರ ಭಾಷಣ