ಬೆಂಗಳೂರು: ಸೋಮವಾರದಿಂದ ಹತ್ತು ದಿನಗಳ ಕಾಲ ರಾಜ್ಯ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗಲಿದ್ದು, ಜನರ ಸಮಸ್ಯೆಗಳು ಹಾಗೂ ಶಾಸನಾತ್ಮಕ ಚಟುವಟಿಕೆಗಳು ಈ ಬಾರಿಯಾದರೂ ನಡೆಯಲಿದೆಯೇ ಎಂಬ ಚರ್ಚೆ ಈಗ ಪ್ರಾರಂಭವಾಗಿದೆ.
ಸೋಮವಾರ ಕಲಾಪ ಆರಂಭವಾಗಲಿದ್ದು, ಮೊದಲು ಸಂತಾಪ ನಿರ್ಣಯ ಮಂಡನೆಯಾಗುತ್ತದೆ. ಸಚಿವ ಉಮೇಶ್ ಕತ್ತಿ ನಿಧನ ಹಿನ್ನೆಲೆಯಲ್ಲಿ ಸಂತಾಪ ಬಳಿಕ ಕಲಾಪ ಒಂದು ದಿನದ ಮಟ್ಟಿಗೆ ಮುಂದೂಡಿಕೆಯಾಗಲಿದೆ.
ಇದು ಚುನಾವಣಾ ವರ್ಷವಾಗಿರುವುದರಿಂದ ರಾಜಕೀಯ ಮಹತ್ವ ಪಡೆಯುವ ವಿಚಾರಗಳನ್ನೇ ಪ್ರಸ್ತಾಪಿಸಲು ಕಾಂಗ್ರೆಸ್ ನಿರ್ಧರಿಸಿದೆ. ಹೀಗಾಗಿ 40% ಕಮಿಷನ್, ಬೆಂಗಳೂರು ಮಳೆ ಅವಾಂತರ, ಸರಕಾರದ ನಿಧಾನ ಗತಿಯ ಸ್ಪಂದನೆ ಇತ್ಯಾದಿ ವಿಚಾರಗಳನ್ನು ಪ್ರಸ್ತಾಪಿಸಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ನಿರ್ಧರಿಸಿದೆ. ಈ ಸಂಬಂಧ ಕಾಂಗ್ರೆಸ್ ರಿಸರ್ಚ್ ಟೀಂ ಭಾರಿ ಸಿದ್ಧತೆ ನಡೆಸಿದೆ.
ಇದನ್ನೂ ಓದಿ:‘ಲಕ್ಕಿಮ್ಯಾನ್’ ಚಿತ್ರ ವಿಮರ್ಶೆ: ದೇವರ ಆಟದಲ್ಲಿ ಲಕ್ಕಿ ಮ್ಯಾನ್ ಮಿಂಚು
ಇನ್ನೊಂದೆಡೆ ಜೆಡಿಎಸ್ ನಡೆ ಕೂಡಾ ನಿಗೂಢವಾಗಿದೆ. ಬಿಡದಿಯನ್ನು ಕಾರ್ಯ ಚಟುವಟಿಕೆ ಮಾಡಿಕೊಂಡಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸರಕಾರ ಹಾಗೂ ಕಾಂಗ್ರೆಸ್ ಎರಡನ್ನೂ ಇಕ್ಕಟ್ಟಿಗೆ ಸಿಲುಕಿಸಲು ಅಧಿವೇಶನವನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ. ಬಿಹಾರ್ ಸಿಎಂ ನಿತೀಶ್ ಕುಮಾರ್ ಭೇಟಿ ಬಳಿಕ ಕುಮಾರಸ್ವಾಮಿ ನಡೆ ಬದಲಾಗಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಇದರ ಜತೆಗೆ ಚುನಾವಣಾ ವರ್ಷದಲ್ಲಿ ತಮ್ಮ ನಾಯಕತ್ವವನ್ನು ಸಾಬೀತು ಪಡಿಸಿಕೊಳ್ಳುವುದು ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೂ ಅನಿವಾರ್ಯವಾಗಿದೆ. ಆದರೆ ಕೆಲವು ಮಹತ್ವದ ವಿಧೇಯಕಗಳು ಈ ಅಧಿವೇಶನದಲ್ಲೇ ತೆಗೆದುಕೊಳ್ಳಬೇಕಾಗಿದೆ.