Advertisement

25 ವರ್ಷಗಳಿಂದ ಪ್ರತಿಫ‌ಲ ಬಯಸದೆ ದೇವರ ಸೇವೆ..!

12:39 PM Jan 12, 2018 | Team Udayavani |

ಸುಳ್ಯ : ಕೂಲಿ ಕೆಲಸಕ್ಕೆ ಹೋಗುವ ಈ ಮಹಿಳೆಯ ಹೆಸರು ಪಾಚು. ನಾವೂರು ನಿವಾಸಿಯಾಗಿರುವ ಇವರು 25 ವರ್ಷ
ಗಳಿಂದ ಯಾವುದೇ ಫಲಾಫೇಕ್ಷೆ ಇಲ್ಲದೆ ದೇವರ ವಿಶೇಷ ಸೇವೆ ಮಾಡುತ್ತಿದ್ದಾರೆ!

Advertisement

ಗಾಂಧಿನಗರದಲ್ಲಿನ ಮಿತ್ತೂರು ನಾಯರ್‌ ಭಂಡಾರ ಬಂದು ನಿಲ್ಲುವ ಕಟ್ಟೆಯೇ ಇವರ ಸೇವಾ ನೆಲೆ. 25 ವರ್ಷಗಳಿಂದ ಕಟ್ಟೆಯ ಹೊರಭಾಗದ ಸುತ್ತಲೂ ಸೆಗಣಿ ಸಾರಿಸಿ, ಶುದ್ಧವಾಗಿರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಜಾತ್ರೆ ಆರಂಭವಾದಾಕ್ಷಣ, ಕೂಲಿ ಕೆಲಸಕ್ಕೆ ರಜೆ ಹಾಕಿ, ಮನೆ-ಮನೆ ಸುತ್ತಾಡಿ ಸೆಗಣಿ ಸಂಗ್ರಹಿಸುತ್ತಾರೆ. ಯಾರಿಗೂ ಕಾಯದೇ ಕಟ್ಟೆಯ ಸುತ್ತ ಸೆಗಣಿ ಸಾರಿಸುತ್ತಾರೆ. 3 ದಿನ ಈ ಕಾರ್ಯ ನಿರಂತರವಾಗಿ ನಡೆಯುತ್ತದೆ.

ನನಗೆ ಯಾವುದೇ ಫ‌ಲಾಪೇಕ್ಷೆ ಇಲ್ಲ. ಮಿತ್ತೂರು ನಾಯರ್‌ ಭಂಡಾರ ತಂಗುವ ಕಟ್ಟೆಯಲ್ಲಿ ಸೇವೆ ಮಾಡುವುದು ಪುಣ್ಯದ ಕೆಲಸ ಎನ್ನುತ್ತಾರೆ ಪಾಚು.

ಕಟ್ಟೆಯ ಹೊರಭಾಗದಿಂದ ಬೀದಿ ಬದಿ ತನಕವೂ ಸ್ವತ್ಛಗೊಳಿಸುತ್ತಾರೆ. ಇವರ ಸೇವೆಯನ್ನು 25 ವರ್ಷಗಳಿಂದ ನೋಡುತ್ತಿದ್ದೇನೆ. ಅದಕ್ಕಿಂತಲೂ ಮುಂಚೆಯೂ ಇದ್ದಿರಬಹುದು. ಈ ಕೆಲಸಕ್ಕೆ ಹಣ ಪಡೆಯುವುದಿಲ್ಲ ಎಂದು ಕಟ್ಟೆ ಸಮೀಪದ ಅಂಗಡಿ ಮಾಲಕರಾದ ಉಮೇಶ್‌, ಕುಸುಮಾಧರ ಅವರು ಹೇಳುತ್ತಾರೆ.

ಕಟ್ಟೆಯ ವಿಶೇಷ
ಜಾತ್ರೆಯಂದು ಮಿತ್ತೂರು ನಾಯರ್‌ ದೈವಗಳ ಭಂಡಾರ ದೇವಸ್ಥಾನಕ್ಕೆ ಬರುವುದು ರೂಢಿ. ಬರುವ ಹಾದಿಯಲ್ಲಿ ಈ ಕಟ್ಟೆಯಲ್ಲಿ ಭಂಡಾರ ಇಟ್ಟು, ಕಟ್ಟೆಪೂಜೆ ಬಳಿಕ ದೇವಸ್ಥಾನಕ್ಕೆ ಭಂಡಾರ ಬಂದ ಬಗ್ಗೆ ಸುದ್ದಿ ಮುಟ್ಟಿಸಲಾಗುತ್ತದೆ. ದೇವಾಲಯದ ವತಿಯಿಂದ ಭಂಡಾರವನ್ನು ಸ್ವಾಗತಿಸಲಾಗುತ್ತದೆ. ಆ ದಿನ ಕಾರ್ಯಕ್ರಮ ಮುಗಿದು, ಮರುದಿನದ ದೊಡ್ಡ ದರ್ಶನ ಬಲಿ ಅನಂತರ ಗಾಂಧಿ ನಗರದಲ್ಲಿರುವ ಮಿತ್ತೂರು ನಾಯರ್‌ ಕಟ್ಟೆಗೆ ಭಂಡಾರ ತೆರಳುತ್ತದೆ. ಕಟ್ಟೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರುವ ಭಕ್ತರಿಗೆ ಪ್ರಸಾದ ವಿತರಿಸಲಾಗುತ್ತದೆ. ಅನಂತರ ಈ ಕಟ್ಟೆಯಿಂದ ಭಂಡಾರ ಮಿತ್ತೂರು ಚಾವಡಿಗೆ ತೆರಳುವುದು ಸಂಪ್ರದಾಯ. ರಥೋತ್ಸವದ ಮರುದಿನ ಚೆನ್ನಕೇಶವ ದೇವರ ಉತ್ಸವ ಬಲಿ ಹೊರಟು ಈ ಕಟ್ಟೆಯಲ್ಲಿ ಪೂಜೆ ಸ್ವೀಕರಿಸುತ್ತದೆ. ಹಾಗಾಗಿ ದೈವ ಮತ್ತು ದೇವರ ಆರಾಧನೆ ನಡೆಯವ ಈ ಕಟ್ಟೆ ಧಾರ್ಮಿಕ ನೆಲೆಯಲ್ಲಿ ಮಹತ್ವ ಪಡೆದಿದೆ.

Advertisement

ನನಗೆ ಯಾವುದೇ ಫಲಾಪೇಕ್ಷೆ ಇಲ್ಲ. ಮಿತ್ತೂರು ನಾಯರ್‌ ಭಂಡಾರ ತಂಗುವ ಕಟ್ಟೆಯಲ್ಲಿ ಸೇವೆ ಮಾಡುವುದು ಪುಣ್ಯದ ಕೆಲಸ ಎನ್ನುತ್ತಾರೆ ಪಾಚು.

Advertisement

Udayavani is now on Telegram. Click here to join our channel and stay updated with the latest news.

Next